ADVERTISEMENT

ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 9:16 IST
Last Updated 22 ಫೆಬ್ರುವರಿ 2026, 9:16 IST
   

ಅಂಕೋಲಾ: ಜೂನ್ ಒಳಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮಂಜಗುಣಿಯಲ್ಲಿ ಭಾನುವಾರ ಗಂಗಾವಳಿ-ಮಂಜಗುಣಿ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.

'ಗೋಕರ್ಣವನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸಲು ಬೇಡಿಕೆ ಇದೆ. ಆದರೆ, ಚುನಾವಣೆಗಳು ಸಮೀಪಿಸಿದೆ. ಜನಗಣತಿಯೂ ನಡೆಯಲಿದೆ. ಹೀಗಾಗಿ, ಸದ್ಯ ಹೊಸದಾಗಿ ಪಟ್ಟಣ ಪಂಚಾಯಿತಿ ರಚನೆ ಸಾಧ್ಯವಾಗದು. ಚುನಾವಣೆಗಳು ಮುಗಿದ ಬಳಿಕ ಗೋಕರ್ಣ ಪಟ್ಟಣ ಪಂಚಾಯಿತಿ ರಚನೆ ಮಾಡಲಾಗುವುದು' ಎಂದರು.

ADVERTISEMENT

'ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪುನರ್ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ' ಎಂದರು.

'ಮಂಜಗುಣಿ-ಗಂಗಾವಳಿ ಸೇತುವೆ ನಿರ್ಮಾಣದಿಂದ ಅಂಕೋಲಾ ಮತ್ತು ಗೋಕರ್ಣ ಭಾಗದ ಜನರು 18 ಕಿ.ಮೀ ಸುತ್ತು ಬಳಸಿ ಸಾಗುವ ಸಮಸ್ಯೆ ತಪ್ಪಿದಂತಾಗಿದೆ. ಈ ಸೇತುವೆ ಕಾಮಗಾರಿಗೆ 2017ರಲ್ಲಿ ನಾನೇ ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಿದ್ದೆ. ನಂತರ ಬಂದ ಬಿಜೆಪಿ ಸರ್ಕಾರ ಕಾಮಗಾರಿ ಪೂರ್ಣಗೊಳಿಸಲಿಲ್ಲ. ನಾನು ಚಾಲನೆ ನೀಡಿದ ಕಾಮಗಾರಿಯನ್ನು ನಾನೇ ಉದ್ಘಾಟಿಸಿದ್ದೇನೆ' ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತೊ‌ರೂಪಿಸಲಾಗುತ್ತಿದೆ. ಗೋವಾಕ್ಕಿಂತ ಕರ್ನಾಟಕದತ್ತ ಪ್ರವಾಸಿಗರನ್ನು ಸೆಳೆಯುವಂತೆ ಯೋಜನೆಗಳನ್ನು ಕಾರ್ಯಗತ ಮಾಡಲಾಗುವುದು' ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ದಿನಕರ ಶೆಟ್ಟಿ, ಭೀಮಣ್ಣ ನಾಯ್ಕ, ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.