ADVERTISEMENT

ಜಿ.ಪಂ ಸಿಇಒ, ಡಿಎಸ್‌ ವಿರುದ್ಧ ಎಸಿಬಿಗೆ ದೂರು

ಹಗರಣಗಳಲ್ಲಿ ಭಾಗಿ, ತನಿಖೆಗೆ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:01 IST
Last Updated 12 ಡಿಸೆಂಬರ್ 2018, 20:01 IST
ಜಿ.ಪಂ. ಅಧ್ಯಕ್ಷೆ ಕೆ.ಆರ್‌. ಜಯಶೀಲಾ
ಜಿ.ಪಂ. ಅಧ್ಯಕ್ಷೆ ಕೆ.ಆರ್‌. ಜಯಶೀಲಾ   

ದಾವಣಗೆರೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಸ್. ಅಶ್ವತಿ ಹಾಗೂ ಉಪ ಕಾರ್ಯದರ್ಶಿ (ಡಿಎಸ್‌) ಜಿ.ಎಸ್‌. ಷಡಕ್ಷರಪ್ಪ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಆಡಳಿತದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರಗಳನ್ನು ನಡೆಸಿದ್ದು, ತನಿಖೆ ಕೈಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.

ಕೆಳಹಂತದ ಅಧಿಕಾರಿಗಳ ಮೇಲೆ ದೂರು ಬಂದಾಗ ಅವರಿಂದ ಲಂಚ ಪಡೆದು 182ಕ್ಕೂ ಹೆಚ್ಚು ಪ್ರಕರಣಗಳನ್ನು ಮುಚ್ಚಿಹಾಕಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಲ್ಲಿ ಮುಳುಗಿರುವ ಈ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಿಗೂ ದೂರು ಸಲ್ಲಿಸಲಾಗುವುದು ಎಂದು ಅಧ್ಯಕ್ಷೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವರಿಬ್ಬರೂ ಮುಚ್ಚಿಹಾಕಿರುವ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ತಕ್ಷಣ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಶ್ವತಿ ಅವರಿಗೆ ಅಧಿಕಾರದ ಅನುಭವ ಇಲ್ಲ. ಷಡಕ್ಷರಪ್ಪ ಅವರ ಕೈಗೊಂಬೆಯಾಗಿದ್ದಾರೆ. ಕೆಲಸ ಮಾಡಬೇಕೆಂಬ ಆಸಕ್ತಿ ಇಲ್ಲ. ಸದಾ ರಜೆ ಮೇಲೆ ಇರುತ್ತಾರೆ. ಬೆಂಗಳೂರಿನ ಐಷಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ ನಡೆಸುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.

ಷಡಕ್ಷರಪ್ಪ ಉಪ ಕಾರ್ಯದರ್ಶಿಯಾಗಿ ಹಾಗೂ ಯೋಜನಾ ನಿರ್ದೇಶಕರಾಗಿ ಸುಮಾರು 15 ವರ್ಷಗಳಿಂದ ಜಿಲ್ಲೆಯಲ್ಲೇ ಠಿಕಾಣಿ ಹೂಡಿದ್ದಾರೆ. ಇವರಿಗೆ ಯಾರ ಅಭಯಹಸ್ತ ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹಾಗೂ ಕಾರಿಗನೂರು ಗ್ರಾಮ ಪಂಚಾಯಿತಿಗಳಲ್ಲಿ ನಿಯಮಬಾಹಿರವಾಗಿ ಒಬ್ಬರೇ ಗುತ್ತಿಗೆದಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರ ಒದಗಿಸಲು ಒಂದೇ ವರ್ಷದಲ್ಲಿ ₹ 1.12 ಕೋಟಿ ಸಂದಾಯ ಮಾಡಿದ್ದಾರೆ. ಕಾನೂನು ‍ಪ್ರಕಾರ ಒಬ್ಬ ಗುತ್ತಿಗೆದಾರನಿಗೆ ಒಂದು ವರ್ಷಕ್ಕೆ ₹ 35 ಲಕ್ಷ ಮಾತ್ರ ಅನುದಾನ ನೀಡಲು ಅವಕಾಶ ಇದೆ. ಅಲ್ಲದೇ, ಹರಪನಹಳ್ಳಿಯ ಅರಣ್ಯ ಇಲಾಖೆಯಲ್ಲಿ ಡಿಟಿಪಿ ಅಂಗಡಿಯ ದೇವರಾಜ್‌ ನಾಯ್ಕ ಎಂಬುವವರ ಬ್ಯಾಂಕ್‌ ಖಾತೆಗೆ ₹ 2.90 ಕೋಟಿ ಸಂದಾಯವಾಗಿದೆ. ಇವು ಕೆಲವು ಉದಾಹರಣೆಗಳಷ್ಟೇ; ಇಂತಹ ಹಲವು ಪ್ರಕರಣಗಳಲ್ಲಿ ಇವರಿಬ್ಬರೂ ಲೋಪ ಎಸಗಿದ್ದಾರೆ. ಇದಕ್ಕೆ ದಾಖಲೆಗಳು ಇವೆ ಎಂದು ಪ್ರದರ್ಶಿಸಿದರು.

₹ 4 ಕೋಟಿ ಶಾಸನಬದ್ಧ ಅನುದಾನ

‘ನನ್ನ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಅನುದಾನಕ್ಕಾಗಿ ಸರ್ಕಾರಕ್ಕೆ ಸಾಕಷ್ಟು ಸಲ ಪತ್ರ ಬರೆದಿದ್ದೇನೆ. ಜಿಲ್ಲಾ ಪಂಚಾಯಿತಿ ಶಾನಸಬದ್ಧ ಅನುದಾನ ₹ 4 ಕೋಟಿ ಅಷ್ಟೇ ಬಂದಿದೆ. ಅದನ್ನು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ’ ಎಂದು ಅಧ್ಯಕ್ಷರು ಹೇಳಿದರು.

ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದರೂ ಜಿಲ್ಲೆಯ ಹರಪನಹಳ್ಳಿ, ಹರಿಹರ ತಾಲ್ಲೂಕುಗಳಿಗೆ ತಲಾ ₹ 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

* ಅಕ್ರಮ ಎಸಗಿದ ಸಿಇಒ, ಡಿಎಸ್‌ ವಿರುದ್ಧ ಇಂದು ದಾವಣಗೆರೆ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಸಲ್ಲಿಸುತ್ತೇನೆ.
–ಕೆ.ಆರ್‌. ಜಯಶೀಲಾ, ಅಧ್ಯಕ್ಷೆ, ಜಿ.ಪಂ.

* ಅಧ್ಯಕ್ಷರ ಆರೋಪ ಗೊತ್ತಿಲ್ಲ. ಸದ್ಯಕ್ಕೆ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಏನೇ ಮಾಡಿದ್ದರೂ ಅದನ್ನು ಕಾನೂನು ಪ್ರಕಾರವೇ ಮಾಡಿರುತ್ತೇನೆ.
–ಎಸ್. ಅಶ್ವತಿ, ಸಿಇಒ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.