ADVERTISEMENT

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಂತೂ ಕೂಡಿ ಬಂತು ಕಾಲ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 14:16 IST
Last Updated 12 ಡಿಸೆಂಬರ್ 2025, 14:16 IST
<div class="paragraphs"><p>ಮತದಾನ</p></div>

ಮತದಾನ

   

ಸುವರ್ಣ ವಿಧಾನಸೌಧ (ಬೆಳಗಾವಿ): ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್‌ ಒಳಗೆ ಪೂರ್ಣಗೊಳಿಸಲು ಗುರುವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ತಾಂತ್ರಿಕ ಕಾರಣಗಳಿಂದ ಚುನಾವಣೆ ನಡೆಸುವುದು ಸುಮಾರು ಐದು ವರ್ಷ ವಿಳಂಬವಾಗಿದ್ದು, 2026ರ ಬೇಸಿಗೆ ಅವಧಿ ಮುಗಿಯುವ ಮೊದಲು ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಲು ತೀರ್ಮಾನಿಸಲಾಗಿದೆ.

ADVERTISEMENT

ಕೆಲ ವರ್ಷಗಳ ಹಿಂದೆಯೇ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡು ಪ್ರಕಟಿಸಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ನೀಡಿತ್ತು. 

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಮೊರೆ ಹೋಗಿತ್ತು. ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್‌ನಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ. ಸಂಪುಟದ ನಿರ್ಧಾರದೊಂದಿಗೆ ಸುದೀರ್ಘ ಅವಧಿ ನನೆಗುದಿಗೆ ಬಿದ್ದಿದ್ದ ಚುನಾವಣೆ ನಡೆಯುವುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.