
ಕನ್ನಡ ಸಂಘ ಬಹರೇನ್ ಆಶ್ರಯದಲ್ಲಿ ಪ್ರಜ್ಞಾನಂ ಟ್ರಸ್ಟ್ (ರಿ) ಉಡುಪಿ ಆಯೋಜಿಸಿದ 'ಹೆಜ್ಜೆಗೊಲಿದ ಬೆಳಕು' ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು. ಹೊಯ್ಸಳ ಸಾಮ್ರಾಜ್ಯದ ಸಾಮ್ರಾಟ ವಿಷ್ಣುವರ್ಧನನ ಪತ್ನಿ, ರಾಣಿ ಶಾಂತಲೆಯ ಆತ್ಮ ವೃತ್ತಾಂತವನ್ನು ಏಕವ್ಯಕ್ತಿ ನಾಟಕದ ಮುಖೇನ ಹೇಳುವಲ್ಲಿ ಪ್ರದರ್ಶನ ಸಫಲವಾಯಿತು.
ಸಂಘದ ’ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣ’ದಲ್ಲಿ ಅದ್ಭುತವಾದ ರಂಗ ಸಜ್ಜಿಕೆ, ನಿಖರವಾದ ಧ್ವನಿ ಮತ್ತು ಬೆಳಕಿನ ಪ್ರವಾಹದಲ್ಲಿ ಮೂಡಿಬಂದ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದುವರೆಗೆ ಕರ್ನಾಟಕದಾದ್ಯಂತ ಹತ್ತಕ್ಕೂ ಹೆಚ್ಚು ಪ್ರದರ್ಶನ ನೀಡಿದ ವಿದುಷಿ ಸಂಸ್ಕೃತಿ ಪ್ರಭಾಕರ್ ತಮ್ಮ ಉತ್ಕೃಷ್ಟ ಅಭಿನಯ ಮತ್ತು ನಾಟ್ಯ ಚಾತುರ್ಯದಿಂದ ಶಾಂತಲೆಯನ್ನೇ ತನ್ನಲ್ಲಿ ಆಹ್ವಾನಿಸಿಕೊಂಡಿದ್ದರೋ ಎಂಬಂತೆ, ಒಂದೂವರೆ ಗಂಟೆಗಳ ಕಾಲ ಅವಿರತವಾಗಿ ನೃತ್ಯ, ಅಭಿನಯ, ಮಾತುಗಾರಿಕೆಯಿಂದ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿಯುವ ಪ್ರದರ್ಶನವನ್ನು ನೀಡಿದರು.
ಗಣೇಶ್ ರಾವ್ ಎಲ್ಲೂರು ಅವರ ಸಮರ್ಥ ನಿರ್ದೇಶನ ಮತ್ತು ಸಂಗೀತ, ಸುಧಾ ಅಡುಕಳರ ರಂಗಪಠ್ಯ, ಶಂಕರ್ ಬೆಳಲಕಟ್ಟೆಯವರ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ, ಸಂಹಿತಾ ಜಿ. ಪಿ. ಅವರ ಸಂಗೀತ ನಿರ್ವಹಣೆ ಈ ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.
ಸಂಘದ ಸದಸ್ಯರಾದ ಕವಿತಾ ಮತ್ತು ಸುರೇಶ್ ಸಿದ್ಧನಕೆರೆ ದಂಪತಿ ಹಾಗು ಶ್ರೀನಾಥ್ ಚೆಕ್ಕೆಯವರು ವಿಶೇಷ ಆಸಕ್ತಿ ವಹಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಘದ ಸದಸ್ಯರು ವೇದಿಕೆ ನಿರ್ಮಾಣದಲ್ಲಿ ಸಹಕರಿಸಿದರು.
ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ, ವೇದಿಕೆಯಲ್ಲಿದ್ದ ಇತರ ಗಣ್ಯರೊಂದಿಗೆ ಸೇರಿ ಪ್ರದರ್ಶನ ನೀಡಿದ ಕಲಾವಿದರಿಗೆ ಮತ್ತು ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ಸುರೇಶ್ ಸಿದ್ಧನಕೆರೆ ದಂಪತಿ ಮತ್ತು ಶ್ರೀನಾಥ್ ಚೆಕ್ಕೆ ಜತೆಯಾಗಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಅವರ ಸ್ವಾಗತ ಮತ್ತು ಗಣ್ಯರು ದೀಪ ಬೆಳಗುವದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕವಿತಾ ಸುರೇಶ್ ಸಮರ್ಥವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.