ADVERTISEMENT

ಅಂತರ್ಜಾಲಕ್ಕೆ ಅಮೆರಿಕ ಗೂಢಚರರ ಕನ್ನ

ಗೂಗಲ್, ಯಾಹೂ, ಫೇಸ್‌ಬುಕ್‌ನಿಂದ ವೈಯಕ್ತಿಕ ಮಾಹಿತಿ ಸೋರಿಕೆ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST
ಅಂತರ್ಜಾಲಕ್ಕೆ ಅಮೆರಿಕ ಗೂಢಚರರ ಕನ್ನ
ಅಂತರ್ಜಾಲಕ್ಕೆ ಅಮೆರಿಕ ಗೂಢಚರರ ಕನ್ನ   

ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನೆ ನಿಗ್ರಹ ಮತ್ತು ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಗೂಗಲ್, ಯಾಹೂ, ಫೇಸ್‌ಬುಕ್, ಯುಟ್ಯೂಬ್ ಮತ್ತು ಆ್ಯಪಲ್‌ನಂತಹ ಜಾಲತಾಣಗಳಿಂದ ವಿದೇಶಿಯರ ವೈಯಕ್ತಿಕ ವಿವರಗಳನ್ನು ರಹಸ್ಯವಾಗಿ ಕದಿಯುತ್ತಿದ್ದ ಮತ್ತೊಂದು ಸ್ಫೋಟಕ ಸುದ್ದಿ ಶುಕ್ರವಾರ ಬಹಿರಂಗವಾಗಿದೆ.

ಗ್ರಾಹಕರ ದೂರವಾಣಿ ದಾಖಲೆಗಳ ಸಂಗ್ರಹ ಭಾರಿ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಹೊರಬಿದ್ದಿರುವ ಮತ್ತೊಂದು ವಿವಾದ ಒಬಾಮ ಆಡಳಿತವನ್ನು ಪೇಚಿಗೆ ಸಿಲುಕಿಸಿದೆ.

ಅಮೆರಿಕದ ಗುಪ್ತಚರ ಸಂಸ್ಥೆಗಳು ಗೂಗಲ್, ಫೇಸ್‌ಬುಕ್, ಯಾಹೂ, ಮೈಕ್ರೋಸಾಫ್ಟ್ ಮತ್ತು ಆ್ಯಪಲ್ ಸೇರಿದಂತೆ ಒಂಬತ್ತು ಪ್ರಸಿದ್ಧ ಅಂತರ್ಜಾಲ ಕಂಪೆನಿಗಳ ಕೇಂದ್ರ ಸರ್ವರ್‌ಗಳಿಂದ ಶಂಕಿತ ವ್ಯಕ್ತಿಗಳ ವೈಯಕ್ತಿಕ ವಿವರ, ಛಾಯಾಚಿತ್ರ, ದಾಖಲೆಗಳನ್ನು ಗೌಪ್ಯವಾಗಿ ಸಂಗ್ರಹಿಸುತ್ತಿವೆ ಎಂದು `ದಿ ವಾಷಿಂಗ್ಟನ್ ಪೋಸ್ಟ್' ಮತ್ತು `ನ್ಯೂಯಾರ್ಕ್ ಟೈಮ್ಸ' ವರದಿ ಮಾಡಿವೆ.

ಭಯೋತ್ಪಾದನೆಯ ಬೆದರಿಕೆ ಮತ್ತು ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಗುಪ್ತಚರ ಸಂಸ್ಥೆಗಳು ಕಳೆದ ಅನೇಕ ವರ್ಷಗಳಿಂದ ವೈಯಕ್ತಿಕ ವಿವರ ಜಾಲಾಡುತ್ತಿವೆ.
`ಪ್ರಿಸಮ್' ಎಂಬ ಸಾಂಕೇತಿಕ ಹೆಸರಿನಲ್ಲಿ ಈ ಕಾರ‌್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಎಫ್‌ಬಿಐ ಒಂಬತ್ತು ಖ್ಯಾತನಾಮ ಸಂಸ್ಥೆಗಳ ಸರ್ವರ್‌ಗಳಿಗೆ ನೇರ ಕಳ್ಳಗಿವಿ ಅಳವಡಿಸಿವೆ. ಯೂಟ್ಯೂಬ್, ಎಒಎಲ್, ಸ್ಕೈಪ್ ಅಂತರ್ಜಾಲ, ಅಂತರ್ಜಾಲ ತಾಣ ಮತ್ತು ಸಾಮಾಜಿಕ ಜಾಲತಾಣಗಳಿಂದ ಧ್ವನಿ, ವಿಡಿಯೊ, ಸಂಭಾಷಣೆ, ಇ-ಮೇಲ್, ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳನ್ನು ಕಲೆ ಹಾಕಿದೆ.

ಹೊರ ದೇಶಗಳ ಜತೆ ನಿಕಟ ಮತ್ತು ನಿತ್ಯ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳ ಅಂತರ್ಜಾಲದ ಮೇಲೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು 2007ರಿಂದಲೇ ಕಣ್ಗಾವಲು ಇರಿಸಿವೆ. ಇದಕ್ಕೆ ಉನ್ನತ ನ್ಯಾಯಾಲಯದ ಅನುಮತಿ ಕೂಡಾ ದೊರೆತಿದೆ. ಹೀಗೆ ರಹಸ್ಯವಾಗಿ ಕದ್ದ ಅಥವಾ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಈ ಸಂಸ್ಥೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಈ ರಹಸ್ಯ ಕಾರ್ಯಾಚರಣೆ ಕುರಿತಂತೆ ಬಹಿರಂಗಗೊಂಡ ಎಲ್ಲ ವಿವರಗಳನ್ನು ಅಮೆರಿಕ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದು, ಕೇವಲ ವಿದೇಶಿ ದೂರವಾಣಿ ಮತ್ತು ಅಂತರ್ಜಾಲ ಮಾಹಿತಿಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ.

ಭಯೋತ್ಪಾದಕ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಎಲ್ಲ ವಿದೇಶಿ ಒಳ ಮತ್ತು ಹೊರ ಹೋಗುವ ಕರೆಗಳ ಮೇಲೆ ಕಣ್ಣಿಡುವಂತೆ ಕಳೆದ ಏಪ್ರಿಲ್‌ನಲ್ಲಿ ಉನ್ನತ ನ್ಯಾಯಾಲಯ ಗುಪ್ತಚರ ಇಲಾಖೆಗಳಿಗೆ ಸೂಚನೆ ನೀಡಿತ್ತು.

ಗುಪ್ತಚರ ಇಲಾಖೆ ಸಮರ್ಥನೆ
ಅಮೆರಿಕದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ಗ್ರಾಹಕರ ದೂರವಾಣಿ ದಾಖಲೆಗಳ ರಹಸ್ಯ ಸಂಗ್ರಹ ಕ್ರಮವನ್ನು ಒಬಾಮ ಆಡಳಿತ ಸಮರ್ಥಿಸಿಕೊಂಡಿದೆ. ಭಯೋತ್ಪಾದಕರ ಬೆದರಿಕೆ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗ್ರಾಹಕರ ವಿವರ ಕಲೆ ಹಾಕುತ್ತಿರುವುದಾಗಿ ಸಮರ್ಥನೆ ನೀಡಿದೆ.

ಭಯೋತ್ಪಾದಕರ ಬೆದರಿಕೆಯಿಂದ ಅಮೆರಿಕ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ಭಾಗವಾಗಿ ಶಂಕಿತ ವ್ಯಕ್ತಿಗಳ ದೂರವಾಣಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಜೇಮ್ಸ ಆರ್. ಕ್ಲಾಪರ್ ಮತ್ತು ಶ್ವೇತಭವನದ ವಕ್ತಾರ ಜೋಶ್ ಅರ‌್ನೆಸ್ಟ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.   

`ದಿ ವಾಷಿಂಗ್ಟನ್ ಪೋಸ್ಟ್' ಮತ್ತು ಬ್ರಿಟನ್‌ನ  `ಗಾರ್ಡಿಯನ್' ಪತ್ರಿಕೆಗಳು ಒಬಾಮ ಆಡಳಿತದ ಈ ರಹಸ್ಯ ಕಾರ್ಯಾಚರಣೆಯನ್ನು ಗುರುವಾರ ಬಹಿರಂಗಗೊಳಿಸಿದ ನಂತರ ಭಾರಿ ವಿವಾದ ಬಿರುಗಾಳಿ ಎದ್ದಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಒಪ್ಪಿಕೊಂಡಿರುವ ಕ್ಲಾಪರ್, ದೂರವಾಣಿ ದಾಖಲೆಗಳು ಶಂಕಿತ ಭಯೋತ್ಪಾದಕರು, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರ ಚಲನವಲನಗಳ ಮೇಲೆ ನಿಗಾ ಇಡಲು ನೆರವಾಗುತ್ತವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT