ವಾಷಿಂಗ್ಟನ್ (ಐಎಎನ್‌ಎಸ್): ಅನ್ಯ ಗ್ರಹ ಜೀವಿಗಳ ಪತ್ತೆ ಮತ್ತು ಬಾಹ್ಯಾಕಾಶದಲ್ಲಿನ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ಕೆ ರೋಬೋಟ್‌ಗಳ ಪ್ರತಿರೂಪದಂತೆಯೇ ಇರುವ `ಸ್ಪೇಸ್ ಬೋಟ್~ಗಳು ಏಕೈಕ ಸಾಧನ ಎಂದು ತಜ್ಞರು ಹೇಳಿದ್ದಾರೆ.
ಈ `ಸ್ಪೇಸ್ ಬೋಟ್~ಗಳು ತಮ್ಮನ್ನು ತಾವೇ ಮರುಸೃಷ್ಟಿ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿದ್ದು, ಇವುಗಳನ್ನು ಭೂಮಿಯಿಂದಲೇ ನಿಯಂತ್ರಿಸುವಂತಹ ಆಜ್ಞಾಧಾರಕ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ `ಸ್ಪೇಸ್ ಬೋಟ್~ಗಳನ್ನು ಹೊತ್ತೊಯ್ಯುವ ವ್ಯೋಮನೌಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಾಹ್ಯಾಕಾಶ ಪರಿಶೋಧನೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ಸಾಧ್ಯ ಎಂದು ಪೆನ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜಾನ್ ಡಿ. ಮಾಥ್ಯೂಸ್ ತಿಳಿಸಿದ್ದಾರೆ.
`ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವೇ ಆದರೂ ಅದು ದುಬಾರಿ ವೆಚ್ಚದ ಬಾಬ್ತು. ಇದಕ್ಕೆ ರಾಜಕೀಯ, ಆರ್ಥಿಕ, ತಾಂತ್ರಿಕ ಅಡಚಣೆಗಳು ಕೂಡಾ ಸಾಕಷ್ಟಿವೆ~ ಎಂಬುದು ಮ್ಯಾಥ್ಯೂಸ್ ಅವರ ವಿಶ್ಲೇಷಣೆ.
`ಅಂತರಿಕ್ಷ ಶೋಧನೆಗೆ ಸಂಬಂಧಿಸಿದಂತೆ ಅನ್ಯಗ್ರಹಗಳಲ್ಲಿ ಇರಬಹುದಾದ ಜೀವಿಗಳೂ ನಮ್ಮಂತೆಯೇ ಕಠಿಣ ಸವಾಲುಗಳನ್ನು ಎದುರಿಸುತ್ತಿರಬಹುದು. ಅಥವಾ, ಇಂತಹ ಶೋಧನೆಯ ಬಗ್ಗೆ ಅವು ಕುತೂಹಲವನ್ನೇ ಹೊಂದಿರದೇ ಇರಬಹುದು~ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.