ADVERTISEMENT

ಅಮೆರಿಕ ವಿದೇಶಾಂಗ ನೀತಿ: ನಾಗರಿಕ ಅಧಿಕಾರ ಬಳಕೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 8:10 IST
Last Updated 18 ಡಿಸೆಂಬರ್ 2010, 8:10 IST

ವಾಷಿಂಗ್ಟನ್ (ಪಿಟಿಐ): ತೀವ್ರ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುವ ಭಾರತ ಮತ್ತು ಚೀನಾ ಜತೆಗೆ ಎಲ್ಲಾ ರಂಗಗಳಲ್ಲಿ ಉತ್ತಮ ಸಂಬಂಧ ಹೊಂದುವುದು, ಮುಕ್ತ ಮಾರುಕಟ್ಟೆ ನೀತಿ, ನಾಗರಿಕ ಅಧಿಕಾರದ ಮೂಲಕ  ಸಂಘರ್ಷವನ್ನು ತಪ್ಪಿಸುವುದು ಅಮೆರಿಕದ 21ನೇ ಶತಮಾನದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶವಾಗಿದೆ.

ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಅಮೆರಿಕದ ರಾಯಭಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಂತೆ ಕಾರ್ಯ ನಿರ್ವಹಿಸಿ ಆಯಾ ರಾಷ್ಟ್ರಗಳ ವಿವಿಧ ರಂಗಗಳ ಸಂಬಂಧವನ್ನು ವೃದ್ಧಿಸಲು ಕೆಲಸ ಮಾಡಬೇಕಾಗುತ್ತದೆ.  ರಾಜತಾಂತ್ರಿಕ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿಯ ನಕಾಶೆಯನ್ನೇ ಬದಲಾಯಿಸುವುದು ನಮ್ಮ 21ನೇ ಶತಮಾನದ ವಿದೇಶಾಂಗ ನೀತಿಯ ಗುರಿಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದರು.

ರಾಜತಾಂತ್ರಿಕತೆ ಮತ್ತು ಅಭಿವೃದ್ಧಿ ಪರಾಮರ್ಶೆಯ ತ್ರೈವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕ ಅಧಿಕಾರದ ವಿದೇಶಾಂಗ ನೀತಿಯಿಂದ ಹಣ ಮತ್ತು ಜನರ ಜೀವ ಎರಡೂ ಉಳಿಯುತ್ತದೆ ಎಂದು ಹೇಳಿದರು. ಹೊಸ ನೀತಿಯ ಅನ್ವಯ ರಾಯಭಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಅಮೆರಿಕ ಮತ್ತು ಇತರ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ಇನ್ನಿತರ ವ್ಯವಹಾರಗಳನ್ನು ಉತ್ತಮಪಡಿಸುವ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಹೇಳಿದರು.

ಸೇನಾ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದೇ ಹೊಸ ನೀತಿಯ ಮುಖ್ಯ ಉದ್ದೇಶ. ಆದ್ದರಿಂದ ನಾಗರಿಕ ಅಧಿಕಾರವನ್ನು ಹೆಚ್ಚಾಗಿ ಬಳಸಿ ಮಾರುಕಟ್ಟೆಯನ್ನು ವಿಸ್ತರಿಸುವುದರಿಂದ ಯುದ್ಧ ಭೀತಿಯನ್ನು ದೂರ ಮಾಡುವುದು ಒಬಾಮ ಆಡಳಿತದ ಗುರಿ ಎಂದು ಹಿಲರಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.