ADVERTISEMENT

ಆಘ್ಘನ್ ಸಮಾವೇಶಕ್ಕೆ ಪಾಕ್ ಗೈರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2011, 19:30 IST
Last Updated 27 ನವೆಂಬರ್ 2011, 19:30 IST
ಆಘ್ಘನ್ ಸಮಾವೇಶಕ್ಕೆ ಪಾಕ್ ಗೈರು
ಆಘ್ಘನ್ ಸಮಾವೇಶಕ್ಕೆ ಪಾಕ್ ಗೈರು   

ಇಸ್ಲಾಮಾಬಾದ್ (ಪಿಟಿಐ): ಗಡಿ ಭಾಗದ ತನ್ನ ಸೇನಾ ನೆಲೆಯ ಮೇಲೆ ನ್ಯಾಟೊ ಪಡೆಗಳು ಎಸಗಿದ ಭೀಕರ ದಾಳಿಯಿಂದ ಆಘಾತ ಹಾಗೂ ಘಾಸಿಗೊಂಡಿರುವ ಪಾಕಿಸ್ತಾನವು ಡಿ.5ರಂದು ಆಘ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯಲಿರುವ ಸಂಧಾನ ಸಮಾವೇಶದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ.

ತಾಲಿಬಾನ್ ಪ್ರಮುಖರನ್ನು ಸಂಧಾನ ಮಾತುಕತೆಗೆ ತರಲು ಅಮೆರಿಕ ಮುಂದಾಳತ್ವದಲ್ಲಿ ನಡೆದ ಪ್ರಯತ್ನಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ನ್ಯಾಟೊ ದಾಳಿ ನಂತರ ಪ್ರಧಾನಿ ಯೂಸುಫ್ ರಜಾ ಗಿಲಾನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ರಕ್ಷಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ನಡೆಸಿಕೊಡಲಿರುವ ಈ ಸಮಾವೇಶದಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಲಿವೆ.

ಆಘ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ವಿದೇಶಿ ಪಡೆಗಳನ್ನು ವಾಪಸು ಕರೆಸಿಕೊಳ್ಳುವ ಹಾಗೂ ತಾಲಿಬಾನ್ ಜತೆಗಿನ ಸಂಧಾನ ಮಾತುಕತೆಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

ಈ ಸಮಾವೇಶದ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಪಾಕಿಸ್ತಾನದ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಷ್‌ಫಕ್ ಪರ್ವೇಜ್ ನಿರುದ್ವಿಗ್ನರಾಗಿದ್ದರಾದರೂ, ಸಮಾವೇಶದಲ್ಲಿ ಪಾಲ್ಗೊಳ್ಳದ ಬಗ್ಗೆ ತಮ್ಮ ನಿಲುವನ್ನು ಖಚಿತಪಡಿಸಿದ್ದಾರೆ.

ಇದೇ ವೇಳೆ, ಆತಂಕಕ್ಕೆ ಒಳಗಾದವರಂತೆ ಕಂಡುಬಂದ ಗಿಲಾನಿ, ತಮ್ಮ ಭಾವನೆಗಳ ಮೇಲೆ ಹತೋಟಿಯನ್ನೇ ಕಳೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಹಣಕಾಸು ಸಚಿವ ಅಬ್ದುಲ್ ಹಫೀಸ್ ಶೇಖ್ ಮಾತ್ರ, ಕಠಿಣ ನಿಲುವು ತೆಗೆದುಕೊಳ್ಳುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚಿಂತಿಸಲು ಸಲಹೆ ನೀಡಿದರು ಎನ್ನಲಾಗಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಹಿನಾ ರಬ್ಬಾನಿ ಖರ್ ಕೂಡ, ಪ್ರಕರಣದಿಂದ ವಿಚಲಿತರಾದವರಂತೆ ಕಂಡುಬಂದರು. ಈ ಮಧ್ಯೆ, ಗಿಲಾನಿ ಈ ಸಂಬಂಧ ಒಂದೆರಡು ದಿನಗಳಲ್ಲಿ ಸಂಸತ್‌ನಲ್ಲಿ ಉಭಯ ಸದನಗಳ ಸಂಸತ್ ಕಲಾಪ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ದಾಳಿ ಸಂಬಂಧ, ಹಿನಾ ರಬ್ಬಾನಿ ಖರ್ ಬೆಳಿಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನ್ಯಾಟೊ ಪಡೆಗಳದಾಳಿಯಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಸುಧಾರಣಾ ಯತ್ನಕ್ಕೆ ತೀವ್ರ ಧಕ್ಕೆಯಾಗಿದೆ ಎಂದು ಅಸಮಾಧಾನ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಲು ಎಲ್ಲ ಸಹಕಾರ ನೀಡುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ. ಹಿಲರಿ ಕ್ಲಿಂಟನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಿಯಾನ್ ಪ್ಯಾನೆಟ್ಟ ವಾಷಿಂಗ್ಟನ್‌ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಗಡಿ ಭಾಗದಲ್ಲಿ ನಡೆದ ಈ ದಾಳಿ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ನ್ಯಾಟೊ ಪಡೆಗಳು ಉಗ್ರರ ವಿರುದ್ಧದ ದಾಳಿಗೆ ಬಳಸಿಕೊಳ್ಳುತ್ತಿರುವ ತನ್ನ ಷಂಸಿ ವಾಯುನೆಲೆಯನ್ನು 15 ದಿನಗಳೊಳಗೆ ತೆರವುಗೊಳಿಸುವಂತೆ ಅಮೆರಿಕಕ್ಕೆ ಸೂಚಿಸುವ ಬಗ್ಗೆಯೂ ಗಿಲಾನಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಆಘ್ಘನ್ ಗಡಿಯ ಪಾಕ್ ಸೇನಾ ನೆಲೆಯೊಂದರ ಮೇಲೆ ನ್ಯಾಟೊ ಪಡೆಗಳು ಶನಿವಾರ ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಕನಿಷ್ಠ 28 ಯೋಧರು ಹತ್ಯೆಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.