ಕಾಬೂಲ್ (ಐಎಎನ್‌ಎಸ್/ ಕ್ಸಿನ್ಹುವಾ/ಎಪಿ): ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರಗಾಮಿಗಳನ್ನು ಮಂಗಳವಾರ ಸೇನೆ ಹತ್ಯೆಗೈದಿದೆ.
ಮಂಗಳವಾರ ಬೆಳ್ಳಂಬೆಳಿಗ್ಗೆ 6.30ರ ಸಮಯದಲ್ಲಿ ನಕಲಿ ಪ್ರವೇಶ ಪತ್ರಗಳೊಂದಿಗೆ ಇಲ್ಲಿನ ರಾಷ್ಟ್ರಪತಿ ಭವನದ ಒಂದನೇ ದ್ವಾರವನ್ನು ಪ್ರವೇಶಿಸಲೆತ್ನಿಸಿದ ತಾಲಿಬಾನ್ ಉಗ್ರರಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಾಗ ಉಗ್ರರು ಗುಂಡಿನ ದಾಳಿ ನಡೆಸಿದರು.
ರಾಕೆಟ್ ಹಾಗೂ ಗ್ರೆನೇಡ್‌ಗಳಿಂದ ದಾಳಿ ನಡೆಸಲಾಯಿತೆಂದು ಹೇಳಲಾಗಿದೆ. ಅಲ್ಲದೆ ಕಾರ್ ಬಾಂಬ್‌ನ್ನು ಉಗ್ರರು ಸ್ಫೋಟಿಸಿದ್ದು, ಒಟ್ಟು 12 ಸ್ಫೋಟಗಳು ರಾಷ್ಟ್ರಪತಿ ಭವನದ ಆವರಣದಲ್ಲಿ ಸಂಭವಿಸಿದವೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ತಕ್ಷಣವೇ ಸುತ್ತುವರೆದ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿ ನಾಲ್ವರು ಉಗ್ರರನ್ನು ಕೊಂದು ಹಾಕಿದರು ಎಂದು ಕಾಬೂಲ್‌ನ ಮುಖ್ಯ ಪೊಲೀಸ್ ಅಧಿಕಾರಿ ಮಹಮ್ಮದ್ ಅಯೂಬ್ ಸಾಲಂಗಿ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಒಬ್ಬ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.