ADVERTISEMENT

ಆರೋಪ ತಳ್ಳಿಹಾಕಿದ ಪಾಕ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST

ಇಸ್ಲಾಮಾಬಾದ್/ನವದೆಹಲಿ(ಐಎಎನ್‌ಎಸ್): ಪಾಕಿಸ್ತಾನದಲ್ಲಿನ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲ ತಾಣದ ಮೂಲಕ ಗಾಬರಿ ಹುಟ್ಟಿಸುವ ಸಂದೇಶ ಮತ್ತು ಚಿತ್ರಗಳನ್ನು ಪ್ರಸಾರ ಮಾಡಿದ್ದರಿಂದ ಈಶಾನ್ಯ ಭಾರತದ ಜನರು ಆತಂಕಕ್ಕೆ ಒಳಗಾಗಿ ಬೇರೆಬೇರೆ ರಾಜ್ಯಗಳಿಂದ ತಾಯ್ನಾಡಿಗೆ ಮರಳುತ್ತಿದ್ದಾರೆ ಎಂಬ ಭಾರತದ ಆಪಾದನೆ ನಿರಾಧಾರವಾದದ್ದು ಎಂದು ಪಾಕ್ ಗೃಹ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.

ಗಾಬರಿ ಹುಟ್ಟಿಸುವ ಸಂದೇಶಗಳು ಮತ್ತು ಚಿತ್ರ ಸಂದೇಶಗಳ ಮೂಲ ಪಾಕಿಸ್ತಾನ ಎಂದು ಭಾರತದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ತಮಗೆ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಮಲಿಕ್ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

`ಸಂದೇಶಗಳ ಮೂಲ ಪಾಕಿಸ್ತಾನ ಎಂಬುದಕ್ಕೆ ಸಾಕ್ಷಾಧಾರಗಳನ್ನು ಒದಗಿಸಿದರೆ ಸೂಕ್ತ ಪರಿಶೀಲನೆ ನಡೆಸಲಾಗುವುದು ಎಂದು ಶಿಂಧೆ ಅವರಿಗೆ ಭರವಸೆ ನೀಡಿದ್ದೇನೆ~ ಎಂದು ಮಲಿಕ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಕೆಲವು ವ್ಯಕ್ತಿಗಳು ಭಾರತದಲ್ಲಿ ಕೋಮು ಭಾವನೆ ಕೆರಳಿಸುವಂತಹ ಸುಳ್ಳು ಸಂದೇಶಗಳನ್ನು ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲ ತಾಣ ಮೂಲಕ ರವಾನೆ ಮಾಡಿದ್ದಾರೆ ಎಂದು ಶಿಂಧೆ ಭಾನುವಾರ ದೂರವಾಣಿಯಲ್ಲಿ ಮಲಿಕ್ ಅವರಿಗೆ ತಿಳಿಸಿದ್ದರು.

ನಿರಾಕರಣೆ: ಈ ಮಧ್ಯೆ ದೆಹಲಿಯಲ್ಲಿ ಇರುವ ಪಾಕ್ ರಾಯಭಾರ ಕಚೇರಿಯು ತನ್ನ ದೇಶದ ವಿರುದ್ಧ ಮಾಡಲಾಗಿರುವ ಆಪಾದನೆಯನ್ನು ತಳ್ಳಿ ಹಾಕಿದ್ದು, ಇಂತಹ ಆಪಾದನೆಗಳಿಂದ ಎರಡೂ ದೇಶಗಳ ಮಧ್ಯೆ ಅಪನಂಬಿಕೆ ಹೆಚ್ಚುತ್ತದೆ ಎಂದು ತಿಳಿಸಿದೆ.

ಮುಂದಿನ ತಿಂಗಳು ಇಸ್ಲಾಮಾಬಾದ್‌ನಲ್ಲಿ ವಿದೇಶಾಂಗ ಸಚಿವರ ಸಭೆ ನಿಗದಿಯಾಗಿರುವ ಸಂದರ್ಭದಲ್ಲಿ ಇಂತಹ ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದೂ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.