ವಾಷಿಂಗ್ಟನ್ (ಪಿಟಿಐ): ರಾಷ್ಟ್ರದ ಕೆಲವು ಭಾಗಗಳನ್ನು ಕೈವಶ ಪಡಿಸಿಕೊಂಡಿರುವ ಇಸ್ಲಾಮೀ ಉಗ್ರಗಾಮಿಗಳ ಜೊತೆ ಸಮರಕ್ಕಾಗಿ ಇರಾಕ್ ಗೆ ಅಮೆರಿಕದ ಸಮರ ಪಡೆಗಳು ವಾಪಸಾಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಶುಕ್ರವಾರ ಇಲ್ಲಿ ಸ್ಪಷ್ಟ ಪಡಿಸಿದರು.
ಆದರೆ ನಿರ್ದಿಷ್ಟ ಗುರಿಯಿಟ್ಟ ಸೂಕ್ತ ಸೇನಾ ಕಾರ್ಯಾಚರಣೆಯ ಅಗತ್ಯವಿದ್ದರೆ ಅದನ್ನು ನಡೆಸಿಕೊಡಲಾಗುವುದು ಎಂದು ಅವರು ಬಾಗ್ದಾದ್ ಗೆ ಭರವಸೆ ನೀಡಿದರು.
'ಇರಾಕ್ ಗೆ ಅಮೆರಿಕ ಪಡೆಗಳು ವಾಪಸಾಗುವುದಿಲ್ಲ. ಆದರೆ ಇರಾಕಿ ಜನತೆಗೆ, ಪ್ರದೇಶಕ್ಕೆ ಮತ್ತು ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆ ಹಾಕಿರುವ ಭಯೋತ್ಪಾದಕರ ವಿರುದ್ಧ ಹೋರಾಡಲು ಇರಾಕ್ ಜನರಿಗೆ ನಾವು ನೆರವು ನೀಡುತ್ತೇವೆ' ಎಂದು ಒಬಾಮಾ ತಮ್ಮ ಉನ್ನತ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆಗಿನ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಉಭಯ ರಾಷ್ಟ್ರಗಳ ಭದ್ರತಾ ಒಪ್ಪಂದದ ಅಡಿಯಲ್ಲಿ ನೆರವು ನೀಡುವಂತೆ ಇರಾಕ್ ಅಮೆರಿಕಕ್ಕೆ ಮನವಿ ಮಾಡಿದೆ. ಮತ್ತು ರಾಷ್ಟ್ರದ ಎರಡನೇ ದೊಡ್ಡ ನಗರವಾದ ಮೊಸುಲ್ ಪಟ್ಟಣವನ್ನು ವಶಪಡಿಸಿಕೊಂಡು ರಾಜಧಾನಿಯತ್ತ ಮುನ್ನುಗ್ಗುತ್ತಿರುವ ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರಗಾಮಿಗಳ ಮೇಲೆ ವಾಯುದಾಳಿ ನಡೆಸುವಂತೆ ಕೋರಿದೆ ಎಂದು ಒಬಾಮಾ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.