ADVERTISEMENT

ಇರಾನ್‌ನೊಂದಿಗೆ ಮಾತುಕತೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಇರಾನ್‌ನ ಉದ್ದೇಶಿತ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಿಕೊಳ್ಳಲು ಆ ದೇಶದ ಜೊತೆ ನೇರ ಮಾತುಕತೆಗೆ ಸಿದ್ಧವಿರುವುದಾಗಿ ಅಮೆರಿಕ ಭಾನುವಾರ ತಿಳಿಸಿದೆ.

ವಿವಾದಕ್ಕೆ ತೆರೆ ಎಳೆಯುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ಇದೇ ಮೊದಲ ಬಾರಿಗೆ ನೇರ ಮಾತುಕತೆ ನಡೆಸಲು ಮುಂದಾಗಿವೆ ಎಂದು ಅಮೆರಿಕಾದ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ (ಎನ್‌ವೈಟಿ)ವರದಿ ಮಾಡಿತ್ತು.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮುಗಿಯುವವರೆಗೆ ಯಾವುದೇ ಮಾತುಕತೆ ನಡೆಸಬಾರದೆಂದು ಇರಾನಿನ ಅಧಿಕಾರಿಗಳು ಆಗ್ರಹಿಸಿದ್ದಾರೆ ಎಂದು ಎನ್‌ವೈಟಿ ವರದಿ ತಿಳಿಸಿದೆ.

ಎನ್‌ವೈಟಿ ವರದಿಯನ್ನು ಶ್ವೇತ ಭವನ ಅಲ್ಲಗಳೆದಿದೆ. ಆದರೂ ಈ ರೀತಿ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಟಾಮಿ ವೇಟರ್ ತಿಳಿಸಿದ್ದಾರೆ.

ಅಮೆರಿಕ-ಪಾಕ್ ಮಾತುಕತೆ

ಇಸ್ಲಾಮಾಬಾದ್ ವರದಿ: ಎರಡು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿರುವ ಅಮೆರಿಕದ ರಾಜತಾಂತ್ರಿಕ ಮಾರ್ಕ್ ಗ್ರೌಸ್‌ಮ್ಯಾನ್ ಭಾನುವಾರ ಇಲ್ಲಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಮತ್ತು ಸೇನಾ ಮುಖ್ಯಸ್ಥ ಅಶ್ಫಾಕ್ ಪರ್ವೇಜ್ ಕಯ್ಯಾನಿ ಅವರನ್ನು ಭೇಟಿಯಾಗಿ ಭಯೋತ್ಪಾದನೆ ವಿರುದ್ಧದ ಹೋರಾಟ, ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ಬಗ್ಗೆ ಮಾತುಕತೆ ನಡೆಸಿದರು.

ಭಾರತ-ಚೀನಾಕ್ಕೆ ಸಲಹೆ
ಬೀಜಿಂಗ್ ವರದಿ :
ಭಾರತ-ಚೀನಾ ಗಡಿ ವಿವಾದ ಸೇರಿದಂತೆ ಇತರ ವಿಷಯಗಳನ್ನು ಪಕ್ಕಕ್ಕಿಟ್ಟು ದೀರ್ಘಕಾಲೀನ ನೀತಿ ನಿರೂಪಣೆಯ ಮೈತ್ರಿ ಮತ್ತು ಅಭಿವೃದ್ಧಿ ಸಾಧಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಚೀನಾ ಮಾಧ್ಯಮಗಳು ತಿಳಿಸಿವೆ.

1962ರ ಅಕ್ಟೋಬರ್ 20ರಂದು ಭಾರತ-ಚೀನಾ ಮಧ್ಯೆ ಯುದ್ದ ನಡೆದು 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಚೀನಾದ ಮಾಧ್ಯಮಗಳು ಈ ಸಲಹೆ ಮಾಡಿವೆ.

ಏಷ್ಯಾ ಉಪಖಂಡದ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ-ಭಾರತ ಮಧ್ಯೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಕೆಲವು ಮಾಧ್ಯಮಗಳು ಅಪನಂಬಿಕೆ, ಭಿನ್ನಾಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದು, ನೆರೆಯ ರಾಷ್ಟ್ರಗಳು ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.