ADVERTISEMENT

ಇರಾನ್ ಅಧ್ಯಕ್ಷ ಚುನಾವಣೆ: ರೋಹನಿ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಟೆಹರಾನ್ (ಎಎಫ್‌ಪಿ): ಇರಾನ್ ಅಧ್ಯಕ್ಷ ಗಾದಿಗೆ ಶುಕ್ರವಾರ ನಡೆದ ಚುನಾವಣೆಯ ಮತಎಣಿಕೆ ಶನಿವಾರ ನಡೆದಿದ್ದು, ಸೌಮ್ಯವಾದಿ ಮುಖಂಡ ಹಸನ್ ರೋಹನಿ ಆಯ್ಕೆಯಾಗಿದ್ದಾರೆ.

ಇದರಿಂದಾಗಿ ಮಹಮೂದ್ ಅಹ್ಮದಿನೆಜಾದ್ ಅವರ ಉತ್ತರಾಧಿಕಾರಿಯಾಗಿ ಹಸನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರೋಹನಿ ಅವರು ಶೇ 50.68ರಷ್ಟು ಮತಗಳನ್ನು ಪಡೆದರು. ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಸಂಪ್ರದಾಯವಾದಿ ಗುಂಪಿನ ಮೊಹಮ್ಮದ್ ಬಾಕ್ವೇರ್ ಖ್ವಾಲಿಬಾಫ್ ಅವರು ಶೇ 16.58 ಮತಗಳನ್ನು ಪಡೆದಿದ್ದಾರೆ. ಮೊಹಮ್ಮದ್ ಅವರು ಟೆಹರಾನ್‌ನ ಮೇಯರ್.

ರಾಷ್ಟ್ರದ 5 ಕೋಟಿ 50 ಲಕ್ಷ ಜನರು ಮತ ಚಲಾಯಿಸಲು ಅರ್ಹತೆ ಹೊಂದಿದ್ದರು. ಸತತ ಎರಡು ಬಾರಿ ಸಂಪ್ರದಾಯವಾದಿಗಳನ್ನು ಗೆಲ್ಲಿಸಿದ್ದ ಮತದಾರರು ಈ ಬಾರಿ ಬದಲಾವಣೆ ಗಾಳಿಯತ್ತ ತಿರುಗಿದ್ದಾರೆ.

ಸೌಮ್ಯವಾದಿ ಗುಂಪಿನ ಮತ್ತೊಬ್ಬ ಅಭ್ಯರ್ಥಿ ಮೊಹಮ್ಮದ್ ರೆಜಾ ಆರಿಫ್ ಅವರು ಮಾಜಿ ಸುಧಾರಣಾವಾದಿ ಅಧ್ಯಕ್ಷ ಮೊಹಮ್ಮದ್ ಖಟಾಮಿ ಅವರ ಮನವಿಯಂತೆ ಕಳೆದವಾರ ಸ್ಪರ್ಧೆಯಿಂದ ಹಿಂದೆ ಸರಿದು, 64 ವರ್ಷದ ಹಸನ್ ರೋಹನಿ ಅವರನ್ನು ಬೆಂಬಲಿಸಿದರು.

ಕ್ರಾಂತಿಕಾರಿ ಪಡೆಯ ಮಾಜಿ ಕಮಾಂಡರ್ ಮೊಹ್ಸೆನ್ ರೆಜಾಯಿ ಶೇ 12.5ರಷ್ಟು ಹಾಗೂ ಉನ್ನತ ಪರಮಾಣು  ಸಂಧಾನಕಾರ ಸಯೀದ್ ಜಲೀಲಿ ಶೇ 11.38ರಷ್ಟು ಮತ ಗಳಿಸಿದ್ದಾರೆ. ಖ್ವಾಲಿಬಾಫ್ ಸೇರಿ ಈ ಮೂವರೂ ಸಂಪ್ರದಾಯವಾದಿ ಗುಂಪಿಗೆ ಸೇರಿದವರಾಗಿದ್ದಾರೆ.

ಮಾಜಿ ವಿದೇಶಾಂಗ ಸಚಿವ ಅಲಿ ಅಕ್ಬರ್ ವೆಲಾಯತಿ ಮತ್ತು ಮೊಹಮ್ಮದ್ ಘರಾಜಿ ಅವರು  ತಲಾ ಶೇ 10 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.