ADVERTISEMENT

ಇಸ್ರೇಲ್ ಪ್ರವಾಸ: ಪ್ರಬುದ್ಧತೆಯ ಭೇಟಿ...

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಜೆರುಸಲೇಂ (ಪಿಟಿಐ): ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಇಸ್ರೇಲ್‌ಗೆ ನೀಡಿದ ಎರಡು ದಿನಗಳ ಭೇಟಿ ಉಭಯ ದೇಶಗಳ ನಡುವಣದ ಬಾಂಧವ್ಯದಲ್ಲಿ ಹೊಸ ಪರ್ವ ಆರಂಭಗೊಂಡಂತೆ ಆಗಿದೆ ಎಂದೇ ಈಗ ಸ್ಥಳೀಯ ರಾಜಕೀಯ ವಲಯಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಆತಿಥೇಯ ರಾಷ್ಟ್ರವು ಕೃಷ್ಣ ಅವರಿಗೆ ನೀಡಿದ ಅದ್ದೂರಿ ಸ್ವಾಗತವು ವಿಶೇಷ ಸ್ನೇಹಿತನನ್ನು ಬರಮಾಡಿಕೊಂಡ ಮಾದರಿಯಲ್ಲಿತ್ತು. ಎರಡೂ ದಿನಗಳ ಕಾಲ ಕೃಷ್ಣ ಅವರ ಜೊತೆ ಇಸ್ರೇಲ್‌ನ ಪ್ರಮುಖರೆಲ್ಲಾ ಅಭಿಮಾನದಿಂದ ನಡೆದುಕೊಂಡ ರೀತಿಯಂತೂ ಅತ್ಯಂತ ಮೇಲ್ಮಟ್ಟದ್ದಾಗಿತ್ತು ಎಂದು ಇಲ್ಲಿನ ರಾಜಕೀಯ ಮೂಲಗಳು ತಿಳಿಸಿವೆ.

ಕೃಷ್ಣ ಪ್ರಧಾನಿ ಕಚೇರಿಗೆ ಆಗಮಿಸಿದಾಗ ಸ್ವತಃ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಕೃಷ್ಣ ಅವರ ಕಾರಿನ ಬಳಿ ಬಂದು ಸ್ವಾಗತಿಸಿದರು. ಅಲ್ಲದೆ ಅವರೊಂದಿಗೆ ಬೆಳಗಿನ ಉಪಾಹಾರವನ್ನೂ ಸೇವಿಸಿ ಎರಡು ಗಂಟೆಗೂ ಹೆಚ್ಚು ಕಾಲ ಆತ್ಮೀಯ ಮಾತುಕತೆ ನಡೆಸಿದರು. ವಿದೇಶಾಂಗ ಸಚಿವ ಅವಿಗ್ದಾರ್ ಲೀಬರ್‌ಮನ್ ಅವರಂತೂ ಕೃಷ್ಣ ಅವರ ಬರುವಿಕೆಗಾಗಿ ಕಾದು ನಿಂತಿದ್ದರು. ಇವಕ್ಕೆಲ್ಲಾ ಮುಕುಟವಿಟ್ಟಂತೆ ಇಸ್ರೇಲಿನ ಅಧ್ಯಕ್ಷರು `ಇಡೀ ಜಗತ್ತಿನಲ್ಲೇ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ~ಎಂದು ಬಣ್ಣಿಸುವ ಮೂಲಕ ಭಾರತದೊಂದಿಗಿನ ತಮ್ಮ ಅಂತರಂಗದ ತುಡಿತ ಎಷ್ಟು ತೀವ್ರವಾಗಿದೆ ಎಂಬುದನ್ನು ಮುಕ್ತವಾಗಿ ಬಿಚ್ಚಿಟ್ಟರು. 10 ವರ್ಷಗಳ ನಂತರ ಆಗಮಿಸಿದ ಭಾರತೀಯ ಗಣ್ಯರೊಬ್ಬರ ಜೊತೆ ಇಸ್ರೇಲ್ ನಡೆದುಕೊಂಡ  ಎಲ್ಲ ಕ್ಷಣಗಳೂ ಅತ್ಯಂತ ಅರ್ಥಪೂರ್ಣವಾಗಿ ದಾಖಲಾದವು ಎಂದು ಮೂಲಗಳು ವಿವರಿಸಿವೆ.

ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಲು ಇಸ್ರೇಲ್‌ನ ಒತ್ತಾಸೆ, ಅದರ ಪರಮಾಣು ಶಕ್ತಿಗಳಿಕೆ, ಕಾಶ್ಮೀರದ ವಿಷಯದ ಬಗೆಗೆ ಇಸ್ರೇಲ್ ಹೊಂದಿರುವಂತಹ ಕಾಳಜಿ, ಭಯೋತ್ಪಾದನೆ ಎದುರಿಸುವಿಕೆ, ಮುಕ್ತ ವಾಣಿಜ್ಯ, ವ್ಯವಹಾರ, ಇಸ್ರೇಲ್‌ನಿಂದ ಭಾರತಕ್ಕೆ ಅನಿಲ ಪೂರೈಕೆ... ಹೀಗೆ ಹತ್ತು ಹಲವು ವಿಷಯ ಚರ್ಚೆಗೆ ವಸ್ತುವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.