ADVERTISEMENT

ಈಜಿಪ್ಟ್‌ನಲ್ಲಿ ಮತ್ತೆ ಹಿಂಸಾಚಾರ

ಮೊರ್ಸಿ ಬೆಂಬಲಿಗರು–ಸೇನೆ ಘರ್ಷಣೆಯಲ್ಲಿ 50 ಬಲಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2013, 19:30 IST
Last Updated 7 ಅಕ್ಟೋಬರ್ 2013, 19:30 IST

ಕೈರೊ (ಎಎಫ್‌ಪಿ): ಈಜಿಪ್ಟ್‌ ಪದಚ್ಯುತ ಅಧ್ಯಕ್ಷ ಮೊಹಮ್ಮದ್‌ ಮೊರ್ಸಿ ಬೆಂಬಲಿತ ಮುಸ್ಲಿಂ ಬ್ರದರ್‌ಹುಡ್‌ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಭಾನುವಾರ ನಡೆದ  ಘರ್ಷಣೆಯಲ್ಲಿ 50 ಜನರು ಸಾವಿಗೀಡಾಗಿದ್ದಾರೆ.

1973ರಲ್ಲಿ ಇಸ್ರೆಲ್‌ ಮೇಲಿನ ಯಾಮ್‌ ಕಿಪ್ಪುರ್‌ ಯುದ್ಧ ಗೆದ್ದ  ಸ್ಮರಣಾರ್ಥ ಏರ್ಪಡಿಸಿದ್ದ ವಾರ್ಷಿಕ ಸಂಭ್ರಮಾಚರಣೆ  ವೇಳೆ ಈ ಘಟನೆ ನಡೆದಿದೆ.

ಕೈರೊದ ಕೇಂದ್ರ ಭಾಗದಲ್ಲಿರುವ ಚೌಕ್‌ನಲ್ಲಿ ವಾರ್ಷಿಕೋತ್ಸವ ಆಚರಣೆಗೆ  ಮುಂದಾದ ಮೊರ್ಸಿ ಬೆಂಬಲಿಗರನ್ನು  ಪೊಲೀಸರು ತಡೆದಾಗ ಪರಸ್ಪರ ಉಭಯ ಗುಂಪುಗಳು ಘರ್ಷಣೆಗೆ ಇಳಿದವು.

ಮೊದಲು ಅಶ್ರುವಾಯು ಸಿಡಿಸಿದ ಯೋಧರು ನಂತರ ಗುಂಪಿನ ಮೇಲೆ ಗುಂಡಿನ ಮಳೆಗರೆದರು.   45 ಜನರು ಸ್ಥಳದಲ್ಲಿಯೇ ಸಾವಿಗೀಡಾದರು. ಮೃತಪಟ್ಟವರಲ್ಲಿ ಮೊರ್ಸಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರ ವಿವಿಧೆಡೆ ಭುಗಿಲೆದ್ದ ಗಲಭೆಯಲ್ಲಿ 268 ಜನರು ಗಾಯಗೊಂಡಿದ್ದಾರೆ.

ಸಮಾರಂಭ ನಡೆಯುತ್ತಿದ್ದ ಐತಿಹಾಸಿಕ ಚೌಕ್‌ನಲ್ಲಿ ರಕ್ತಸಿಕ್ತ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸೇನೆಯ ವಾಹನಗಳಿಗೆ ಮೊರ್ಸಿ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ.

ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸ­ಲಾಗಿದ್ದು, ರಸ್ತೆಗಳು ನಿರ್ಜನವಾಗಿವೆ. ಈ ನಡುವೆ ಉಗ್ರರು  ಅಲ್ಲಲ್ಲಿ ನಡೆಸಿದ  ಗುಂಡಿನ ದಾಳಿಯಲ್ಲಿ  9 ಭದ್ರತಾ  ಸಿಬ್ಬಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.