ADVERTISEMENT

ಈಜಿಪ್ಟ್ ಮತ್ತೆ ಅಶಾಂತ

ಸೇನೆ ಗುಂಡಿಗೆ 120 ಮೊರ್ಸಿ ಬೆಂಬಲಿಗರ ಬಲಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 19:59 IST
Last Updated 27 ಜುಲೈ 2013, 19:59 IST
ಕೈರೊದಲ್ಲಿ ಶನಿವಾರ ಮೊರ್ಸಿ ಬೆಂಬಲಿಗರು ಪೊಲೀಸರತ್ತ ಕಲ್ಲು ತೂರಿದರು
ಕೈರೊದಲ್ಲಿ ಶನಿವಾರ ಮೊರ್ಸಿ ಬೆಂಬಲಿಗರು ಪೊಲೀಸರತ್ತ ಕಲ್ಲು ತೂರಿದರು   

ಕೈರೊ (ಎಎಫ್‌ಪಿ): ಈಜಿಪ್ಟ್‌ನಲ್ಲಿ ಶನಿವಾರ ತೀವ್ರ ಹಿಂಸಾಚಾರ ನಡೆದಿದ್ದು, ಪದಚ್ಯುತ ಅಧ್ಯಕ್ಷ ಮೊಹಮದ್ ಮೊರ್ಸಿ ಅವರ 120ಕ್ಕೂ ಹೆಚ್ಚು ಬೆಂಬಲಿಗರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗ್ದ್ದಿದಾರೆ. ರಾಜಧಾನಿ ಕೈರೊ ಸೇರಿದಂತೆ ದೇಶದ ವಿವಿಧೆಡೆ ಪ್ರಕ್ಷುಬ್ದ ಸ್ಥಿತಿಯಿದೆ. ಮೋರ್ಸಿ ಬೆಂಬಲಿಗರು ಮತ್ತು ವಿರೋಧಿಗಳ ಮಧ್ಯೆ ಬೀದಿ ಕಾಳಗ ನಡೆದಿದೆ.

ಮೊರ್ಸಿ ಅವರನ್ನು ಪುನಃ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸುತ್ತಿದ್ದ ಇಸ್ಲಾಂವಾದಿ ಚಳವಳಿಗಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಸಹಸ್ರಾರು ಜನ ಗಾಯಗೊಂಡಿದ್ದಾರೆ ಎಂದ ಮೊರ್ಸಿ ಅವರ  ಮುಸ್ಲಿಂ ಬ್ರದರ್‌ಹುಡ್ ಸಂಘಟನೆ ಆರೋಪಿಸಿದೆ.

ಈಜಿಪ್ಟ್ ಆರೋಗ್ಯ ಸಚಿವರು ಸತ್ತವರ ಸಂಖ್ಯೆ 19 ಎಂದಿದ್ದಾರೆ. ಅಲೆಕ್ಸಾಂಡ್ರಿಯಾದಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ 14 ವರ್ಷದ ಬಾಲಕ ಸೇರಿದಂತೆ 9 ಜನರು ಹಾಗೂ ಕೈರೊದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಏಳು ಪೊಲೀಸರು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ರಬಾ ಅಲ್-ಅದವಿಯಾ ಮಸೀದಿ ಬಳಿ ಇರುವ ವೈದ್ಯರು, ಬಿಬಿಸಿ ವರದಿಗಾರರ ಜತೆ ಮಾತನಾಡುತ್ತಾ ಸುಮಾರು ಒಂದು ಸಾವಿರ ಜನರು ಗಾಯಗೊಂಡಿದ್ದಾರೆ  ಎಂದಿದ್ದಾರೆ.

ಮೊರ್ಸಿ ಬೆಂಬಲಿಗರ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲು `ಜನಾದೇಶ ನೀಡುವ' ಸಂಕೇತವಾಗಿ ಶುಕ್ರವಾರ ಬೀದಿಗಳಲ್ಲಿ ಬೃಹತ್ ರ‍್ಯಾಲಿಗಳನ್ನು ನಡೆಸುವಂತೆ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತಾ ಅಲ್ ಸಿಸಿ ದೇಶದ ನಾಗರಿಕರಿಗೆ ಕರೆ ನೀಡಿದ್ದರು. ಇದಕ್ಕೆ ಮನ್ನಣೆ ನೀಡಿ ಮೊರ್ಸಿ ವಿರೋಧಿ ಜನ ಸಮೂಹ ಬೀದಿಗೆ ಬಂದು ಮೊರ್ಸಿ ಬೆಂಬಲಿಗರ ಜತೆ ನೇರ ಸಂಘರ್ಷಕ್ಕೆ ಇಳಿದಿತ್ತು. ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಗಳೂ ಈ ಜನ ಸಮೂಹದ ಬೆಂಬಲಕ್ಕೆ ನಿಂತಿದ್ದಾರೆ.

ಅನೇಕ ಕ್ರಿಮಿನಲ್ ಆಪಾದನೆಗಳನ್ನು ಎದುರಿಸುತ್ತಿರುವ ಮೊರ್ಸಿ ಅವರನ್ನು ಪದಚ್ಯುತಗೊಳಿಸಿದ ನಂತರ ಬಂಧನದಲ್ಲಿಡಲಾಗಿದೆ. ಜೊತೆಗೆ ಅವರ ಕೆಲವು ಆಪ್ತರನ್ನೂ ಜೈಲಿನಲ್ಲಿ ಇಡಲಾಗಿದೆ. ಶುಕ್ರವಾರ ಈಜಿಪ್ಟ್ ಕೋರ್ಟ್ ತೀರ್ಪೊಂದನ್ನು ನೀಡಿ, ಪ್ಯಾಲೆಸ್ಟೈನ್ ಹಮಾಸ್ ಉಗ್ರಗಾಮಿಗಳೊಡನೆ ಮೊರ್ಸಿ ನಾಯಕತ್ವದ ಮುಸ್ಲಿಂ ಬ್ರದರ್‌ಹುಡ್ ಸಂಘಟನೆ ಸಂಪರ್ಕ ಹೊಂದಿದ ಕಾರಣಕ್ಕಾಗಿ, ಅವರ ವಿರುದ್ಧ ದೋಷಾರೋಪಹೊರಿಸಿದೆ.

ಬ್ರಿಟನ್ ಆಕ್ಷೇಪ: ಮೊರ್ಸಿ ಬೆಂಬಲಿಗರನ್ನು ಹತ್ತಿಕ್ಕಲು ಬಲಪ್ರಯೋಗ ನಡೆಸುತ್ತಿರುವುದನ್ನು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಖಂಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಗೌರವಿಸಲು ಮತ್ತು ಮೊರ್ಸಿ ಪದಚ್ಯುತಿ ನಂತರ ಬಂಧಿಸಲಾಗಿರುವ ರಾಜಕೀಯ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಅವರು ಈಜಿಪ್ಟ್‌ನ ಉಸ್ತುವಾರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.