ಷಿಕಾಗೊ (ಪಿಟಿಐ): ಪಾಕಿಸ್ತಾನ ಮತ್ತು ಐಎಸ್‌ಐನ ಆಣತಿಯಂತೆ ಮುಂಬೈ ಮೇಲೆ ದಾಳಿ ನಡೆಸಲು ತಾನು ಪ್ರೋತ್ಸಾಹಿಸಿದ್ದಾಗಿ ಪಾಕ್ ಮೂಲದ ಕೆನಡಾ ಪ್ರಜೆ ತಹವೂರ್ ರಾಣಾ ಹೇಳಿಕೆ ನೀಡಿದ ಎರಡು ದಿನಗಳ ನಂತರ ಆತನ ವಕೀಲರು, ರಾಣಾ ಗೊತ್ತಿದ್ದೂ, ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಆತನ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
2008ರ ನವೆಂಬರನಲ್ಲಿ ಮುಂಬೈ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ತಾನು ಕೃತ್ಯದಲ್ಲಿ ಭಾಗಿಯಾಗಿದ್ದೆ ಎಂದಾಗಲೀ, ಇಲ್ಲವೇ ತಪ್ಪೊಪ್ಪಿಗೆಯನ್ನಾಗಲೀ ರಾಣಾ ನೀಡಿಲ್ಲ. ಜತೆಗೆ ಆತ ಗೊತ್ತಿದ್ದು, ಇಂತಹ ಕೃತ್ಯದಲ್ಲಿ ಭಾಗಿಯಾಲು ಸಾಧ್ಯವಿಲ್ಲ ಎನ್ನುವುದು ರಾಣಾ ಪರ ಅಟಾರ್ನಿಗಳಾದ ಪ್ಯಾಟ್ರಿಕ್ ಡಬ್ಲ್ಯು ಬೆಲ್ಜೆನ್ ಮತ್ತು ಚಾರ್ಲ್ಸ್ ಡಿ.ಸ್ವಿಪ್ಟ್ ಸ್ಪಷ್ಟನೆ ನೀಡಿದ್ದಾರೆ. ಮುಂಬೈ ದಾಳಿಗೆ ಪಾಕ್ ಮತ್ತು ಐಎಸ್‌ಐನ ಆಣತಿಯಂತೆ ಉಗ್ರರಿಗೆ ಭೌತಿಕ ಪ್ರೋತ್ಸಾಹ ನೀಡಿದ್ದಾಗಿ ಷಿಕಾಗೊ ನ್ಯಾಯಾಲಯದಲ್ಲಿ ರಾಣಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆತನ ಪರ ವಕೀಲರು ಅದನ್ನು ಅಲ್ಲಗಳೆದ ತದ್ವಿರುದ್ಧವಾದ ಸ್ಪಷ್ಟನೆ ನೀಡಿದ್ದಾರೆ.
ದಾಳಿಯ ಬಗ್ಗೆ ಗೊತ್ತಿದ್ದು ಉಗ್ರರಿಗೆ ರಾಣಾ ಬೆಂಬಲ ನೀಡಿಲ್ಲ ಎನ್ನುವುದು ಆತನ ವಕೀಲರ ವಿವರಣೆಯಾಗಿದೆ. ಮುಂಬೈನಲ್ಲಿ ಡೇವಿಡ್ ಹೆಡ್ಲಿ ಕಚೇರಿ ತೆರೆಯಲು ರಾಣಾ ಸಹಕಾರ ನೀಡಿದ್ದ ಎನ್ನುವುದು ರಾಣಾ ಮೇಲಿರುವ ಆರೋಪ. ಐಎಸ್‌ಐ ಉಗ್ರ ಸಂಘಟನೆಯಲ್ಲ. ಜತೆಗೆ ಆತನ ಮೇಲೆ ಭೌತಿಕ ಪೋತ್ಸಾಹ ನೀಡಿದ ಆರೋಪಗಳೂ ಇಲ್ಲ ಎಂದು ಹೇಳಿದ್ದಾರೆ. ಮೇ 16ರಂದು ಈತನ ವಿಚಾರಣೆ ಇದ್ದು, ಹೆಡ್ಲಿ ಸಾಕ್ಷಿಯಾಗಿ ಹೇಳಿಕೆ ನೀಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.