ಕಾಬೂಲ್ (ಪಿಟಿಐ): ತಾಲಿಬಾನ್‌ಉಗ್ರರ ತಂಡ ಆಫ್ಘಾನಿಸ್ತಾನದ ಸಂಸತ್ ಭವನದ ಒಳಗೆ ಪ್ರವೇಶಿಸಲು ಭಾನುವಾರ ದುಸ್ಸಾಹಸ ನಡೆಸಿತು.
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಉಗ್ರರು ದಾಳಿ ನಡೆಸಿದರು. ಆಗ ಭದ್ರತಾ ಪಡೆಗಳ ಜೊತೆ ಸಂಸದರೂ ಖುದ್ದಾಗಿ ಕೈಜೋಡಿಸಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾದರು. ಇದಕ್ಕೆ ಮುನ್ನ ಸಂಸತ್ ಭವನಕ್ಕೆ ಸಮೀಪದ 6 ಮಹಡಿ ಕಟ್ಟಡವನ್ನು ಭಯೋತ್ಪಾದಕರು ವಶಪಡಿಸಿಕೊಂಡಿದ್ದರು.
ಕಾಬೂಲ್ ಬಳಿಯ ಶಹರ್-ಎ- ನಾವ್‌ದಲ್ಲಿನ ಹೊಸ ಕಟ್ಟಡವೊಂದರ ಮೇಲೆ ನಿಯಂತ್ರಣ ಸಾಧಿಸಿದ ಉಗ್ರರು ಅದರ ಸಮೀಪದಲ್ಲೇ ಇರುವ ಅಮೆರಿಕ, ಇರಾನ್, ಟರ್ಕಿ ರಾಯಭಾರ ಕಚೇರಿಗಳು, ಐಎಸ್‌ಎಎಫ್ ಕೇಂದ್ರ ಕಚೇರಿ, ಅಧ್ಯಕ್ಷರ ಅರಮನೆ ಹಾಗೂ ಇತರ ರಾಜತಾಂತ್ರಿಕ ಕಚೇರಿಗಳನ್ನು ಒಳಗೊಂಡ ಸಮುಚ್ಛಯದ ಮೇಲೆ ಗುಂಡಿನ ಮಳೆಗರೆದಿದ್ದಾರೆ. ರಷ್ಯ, ಬ್ರಿಟನ್ ರಾಯಭಾರ ಕಚೇರಿಗಳ ಮೇಲೆ ರಾಕೆಟ್ ದಾಳಿಗಳು ನಡೆದಿವೆ.
ಪೂರ್ವ ನಗರ ನಂಗರ್‌ಹರ್ ಪ್ರಾಂತ್ಯದಲ್ಲಿನ ಜಲಾಲಾಬಾದ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಮುಂದಾದ ನಾಲ್ವರು ಆತ್ಮಾಹುತಿ ದಾಳಿಕೋರರನ್ನು ಭದ್ರತಾ ಪಡೆಗಳು ತಡೆದಾಗ ಇಬ್ಬರು ಪ್ರವೇಶದ್ವಾರದ ಮೇಲೆ ಹಾರಿ ತಮ್ಮನ್ನು ಸ್ಫೋಟಿಸಿಕೊಂಡರು. ಈ ಸಂದರ್ಭದಲ್ಲಿ ಗಾಯಗೊಂಡ ಇನ್ನಿಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದರು.
ಒಟ್ಟು ಕಾಬೂಲ್‌ನ 7 ಸ್ಥಳಗಳಲ್ಲಿ, ಜಲಾಲಾಬಾದ್, ಲೊಗಾರ್ ಮತ್ತು ಪಕ್ತಿಯಾ ನಗರಗಳಲ್ಲಿ ಸರಣಿ ಗುಂಡು ಹಾಗೂ ಬಾಂಬ್ ದಾಳಿಗಳು ನಡೆದಿದ್ದು, ಹಲವೆಡೆ ಆಫ್ಘನ್ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.
ಈ ಎಲ್ಲ ದಾಳಿಗಳ ಸಂಪೂರ್ಣ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ. ಇದು ಹಲವು ತಿಂಗಳುಗಳ ಪೂರ್ವ ನಿಯೋಜಿತ ದಾಳಿಯಾಗಿದೆ ಎಂದು ಅದು ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.