ADVERTISEMENT

ಎಚ್ಚರ ವಹಿಸಲು ಬಿಜೆಪಿ ಸಲಹೆ

ತಾಲಿಬಾನ್ ಜೊತೆ ಅಮೆರಿಕ ಶಾಂತಿ ಮಾತುಕತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2013, 19:59 IST
Last Updated 24 ಜುಲೈ 2013, 19:59 IST
ಎಚ್ಚರ ವಹಿಸಲು ಬಿಜೆಪಿ ಸಲಹೆ
ಎಚ್ಚರ ವಹಿಸಲು ಬಿಜೆಪಿ ಸಲಹೆ   

ವಾಷಿಂಗ್ಟನ್ (ಪಿಟಿಐ): ತಾಲಿಬಾನ್ ಉಗ್ರರ ಜೊತೆಗೆ ಯಾವುದೇ ರೀತಿಯ ಶಾಂತಿ ಮಾತುಕತೆ ನಡೆಸುವ ಮುನ್ನ ಅಮೆರಿಕ ಎಚ್ಚರಿಕೆಯಿಂದ ಮುಂದುವರಿಯಬೇಕು. ಈ ಉಗ್ರರ ಗುಂಪಿನದು ಕ್ಷಣಕ್ಕೊಂದು ಸ್ವಭಾವವಾದ ಕಾರಣ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಕ್ಕೆ ಇದು ಧಕ್ಕೆ ಉಂಟು ಮಾಡಬಹುದು ಎಂದು ಬಿಜೆಪಿ ಹೇಳಿದೆ.

ಅಮೆರಿಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ಇಲ್ಲಿನ ಕ್ಯಾಪಿಟಲ್ ಹಿಲ್‌ನಲ್ಲಿ  ಭಾರತ ಪ್ರತಿಷ್ಠಾನ ಮತ್ತು ಭಾರತ ಮೂಲದವರ ಅಧ್ಯಯನ ಕೇಂದ್ರ, ಅಮೆರಿಕದಲ್ಲಿನ ಭಾರತೀಯರ ರಾಜಕೀಯ ಕ್ರಿಯಾ ಸಮಿತಿ ಮತ್ತು ಅಮೆರಿಕದ ವಿದೇಶಾಂಗ ನೀತಿ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಆಫ್ಘಾನಿಸ್ತಾನ ಕುರಿತ ಸಭೆಯಲ್ಲಿ ಮಾತನಾಡಿದರು.

ಭಾರತವನ್ನು ಕಡೆಗಣಿಸದಿರಿ: `ಆಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಟಕ್ಕೆ ಪಾಕಿಸ್ತಾನವನ್ನು ಜೊತೆಗೆ ಸೇರಿಕೊಂಡಿದ್ದರಿಂದ ಭಯೋತ್ಪಾದನೆ ನಿಗ್ರಹಿಸುವ ಅಮೆರಿಕದ ಉದ್ದೇಶಕ್ಕೆ ಯಶಸ್ಸೇನೂ ದೊರಕಿಲ್ಲ. ಬದಲಿಗೆ ಹಿನ್ನಡೆಯಾಗಿದೆ. ಏಷ್ಯಾದ ಈ ಭಾಗದಲ್ಲಿ ಭಯೋತ್ಪಾದನೆ ವಿರುದ್ಧ ಯಾವುದೇ ಹೋರಾಟಕ್ಕೆ ಅಮೆರಿಕ ಮುಂದಾದರೆ ಭಾರತವನ್ನು ಕಡೆಗಣಿಸಬಾರದು' ಎಂದು ಸಿಂಗ್ ಹೇಳಿದರು.

ಮಾನವ ಹಕ್ಕು ಉಲ್ಲಂಘನೆ: `ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ದೊಡ್ಡ ಮಟ್ಟದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಗಿಲ್ಗಿಟ್ ಬಲ್ತಿಸ್ತಾನ್ ಪ್ರಾಂತ್ಯದಲ್ಲಿ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ' ಎಂದು  ಆರೋಪಿಸಿದರು.

ಬುದ್ಧ ಪ್ರತಿಮೆ ನಿರ್ಮಾಣದ ಭರವಸೆ: ಉತ್ತರ ಪ್ರದೇಶದ ಕುಶಿ ನಗರ್‌ದಲ್ಲಿ ಬಮಿಯಾನ್‌ನ ಬುದ್ಧ ಪ್ರತಿಮೆ ಪ್ರತಿರೂಪ ನಿರ್ಮಿಸುವ ಭರವಸೆಯನ್ನು ರಾಜನಾಥ್ ಸಿಂಗ್ ನೀಡಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT