ADVERTISEMENT

ಏರ್‌ಲ್ಯಾಂಡರ್‌–10 ಜಗತ್ತಿನ ಅತೀ ದೊಡ್ಡ ವಿಮಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:39 IST
Last Updated 18 ಆಗಸ್ಟ್ 2016, 19:39 IST
ಪ್ರಜಾವಾಣಿ ಗ್ರಾಫಿಕ್ಸ್
ಪ್ರಜಾವಾಣಿ ಗ್ರಾಫಿಕ್ಸ್   

ಲಂಡನ್‌ (ಎಎಫ್‌ಪಿ): ಜಗತ್ತಿನ ಅತ್ಯಂತ ‘ದೊಡ್ಡ ವಿಮಾನ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ವಾಯು ವಿಮಾನ’ ಮೊದಲ ಬಾರಿಗೆ ಯಶಸ್ವಿಯಾಗಿ ಹಾರಾಡಿದೆ. ಅರ್ಧ ವಿಮಾನದಂತೆ ಹಾಗೂ ಇನ್ನರ್ಧ ಭಾಗ ವಾಯು ವಿಮಾನದಂತೆ ಇರುವ ಇದಕ್ಕೆ ‘ಏರ್‌ಲ್ಯಾಂಡರ್‌–10’ ಎಂದು ಹೆಸರಿಡಲಾಗಿದೆ. 

ಬ್ರಿಟನ್ನಿನ ಕಾರ್ಡಿಂಗ್ಟನ್‌ ನಿಲ್ದಾಣದಿಂದ  ಬುಧವಾರ ನಭಕ್ಕೆ ಏರಿದ ವಿಮಾನವು 30 ನಿಮಿಷಗಳ ಯಶಸ್ವಿಯಾಗಿ ಆಗಸದಲ್ಲಿ ತೇಲಾಡಿ ನೋಡುಗರನ್ನು ಆಕರ್ಷಿಸಿತು. ಬ್ರಿಟನ್ನಿನ ಹೈಬ್ರಿಡ್‌ ಏರ್‌ ವೆಹಿಕಲ್ಸ್‌ (ಎಚ್‌ಎವಿ) ಕಂಪೆನಿ ಈ ವಿಮಾನವನ್ನು ರೂಪಿಸಿದೆ. ನಾಲ್ಕು ದಿನಗಳ ಹಿಂದೆಯೇ ವಿಮಾನದ ಮೊದಲ ಹಾರಾಟಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ವಿಶೇಷತೆಗಳು...
*ಜನರಿಲ್ಲದೆ 2 ವಾರ ಮತ್ತು ಮಾನವ ಸಹಿತ 5 ದಿನಗಳ ಕಾಲ ಆಕಾಶದಲ್ಲಿ ತೇಲಾಡುವ ಸಾಮರ್ಥ್ಯ

*ಈ ವಿಮಾನದ ತಂತ್ರಜ್ಞಾನವು  ಹೆಲಿಕಾಪ್ಟರ್‌ ತಂತ್ರಜ್ಞಾನಕ್ಕಿಂತ ಅಗ್ಗ ಮತ್ತು ಪರಿಸರ ಸ್ನೇಹಿ

*ಸರಕು ಸಾಗಣೆಯ ಉದ್ದೇಶಕ್ಕೂ  ಬಳಸಬಹುದು.

*2007ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು.

*ಮೂಲತಃ ಅಮೆರಿಕದ ಸೇನೆಗಾಗಿ ಈ ವಿಮಾನ ರೂಪಿಸಲಾಗಿತ್ತು. ಶತ್ರುಗಳ ಮೇಲೆ ನಿಗಾ ಇಡುವ ವಿಮಾನವನ್ನು ಅಭಿವೃದ್ಧಿ ಪಡಿಸುವುದು ಮೂಲ ಯೋಜನೆಯಾಗಿತ್ತು. ಆದರೆ, ಹಣಕಾಸಿನ  ಕೊರತೆ ಕಾರಣಕ್ಕೆ ಕೈಬಿಡಲಾಗಿತ್ತು.

* ಏನಿದು ವಾಯುವಿಮಾನ?
ಬಲೂನಿನ ರೀತಿಯ ದೇಹದಲ್ಲಿ ಗಾಳಿಗಿಂತ ಹಗುರವಾದ ಅನಿಲವನ್ನು  (ಸಾಮಾನ್ಯವಾಗಿ ಹೀಲಿಯಂ, ಜಲಜನಕ)  ತುಂಬಿಕೊಂಡು ಆಕಾಶದಲ್ಲಿ ತೇಲಾಡುವ ವಿಮಾನ.

ಕಹಿ ನೆನಪು
85 ವರ್ಷಗಳ ಹಿಂದೆ, ಅಂದರೆ 1930ರಲ್ಲಿ ಮೊದಲ ವಾಯುವಿಮಾನ (ಗಾಳಿಗಿಂತ ಹಗುರವಾದ ವಿಮಾನ) ‘ಆರ್‌101’ ಫ್ರಾನ್ಸ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಆಗ 48 ಜನರು ಪ್ರಾಣ ಕಳೆದುಕೊಂಡಿದ್ದರು. ಆ ವಿಮಾನ ಕೂಡ ಕಾರ್ಡಿಂಗ್ಟನ್‌ ನಿಂದಲೇ ಪ್ರಯಾಣ ಆರಂಭಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.