ADVERTISEMENT

ಏಳು ಒಪ್ಪಂದಗಳಿಗೆ ಭಾರತ – ಮ್ಯಾನ್ಮಾರ್ ಸಹಿ

ಪಿಟಿಐ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಮ್ಯಾನ್ಮಾರ್ ಪ್ರವಾಸದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಮ್ಯಾನ್ಮಾರ್ ಪ್ರವಾಸದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್   

ನೈ ಪೆ ತಾವ್: ಭೂಗಡಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಮ್ಯಾನ್ಮಾರ್ ಶುಕ್ರವಾರ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಗುರುವಾರ ಇಲ್ಲಿಗೆ ಬಂದಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿ ಕುರಿತು ಮ್ಯಾನ್ಮಾರ್ ನಾಯಕರ ಜೊತೆ ಚರ್ಚೆ ನಡೆಸಿದರು.

ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಮೈತ್ರಿಯನ್ನು ಬಲಗೊಳಿಸುವ ಮಾರ್ಗೋಪಾಯಗಳನ್ನು ಸರ್ಕಾರದ ಕೌನ್ಸೆಲರ್‌ ಆಂಗ್ ಸಾನ್ ಸೂಕಿ ಅವರ ಜೊತೆ ಚರ್ಚಿಸಲಾಯಿತು.

ಸಹಕಾರದ ಭರವಸೆ: ರೋಹಿಂಗ್ಯಾ ಮುಸ್ಲಿಮರು ಇದ್ದ ರಾಖೈನ್ ರಾಜ್ಯದ ಅಭಿವೃದ್ಧಿ, ನಿರಾಶ್ರಿತರ ವಾಪಸಾತಿ, ಮ್ಯಾನ್ಮಾರ್‌ಗೆ ಸಹಕಾರ ನೀಡಿಕೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. 2016ರಲ್ಲಿ ಹಿಂಸಾಚಾರದ ಕಾರಣ ಸುಮಾರು ಏಳು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ರೋಹಿಂಗ್ಯಾ ಸಮುದಾಯದ ಜನರ ಪುನರ್ವಸತಿ, ಸುರಕ್ಷಿತ ವಾಪಸಾತಿ ಹಾಗೂ ರಾಜ್ಯದ ಅಭಿವೃದ್ಧಿಗೆ ಭಾರತ ಸಹಕಾರ ನೀಡುತ್ತದೆ ಎಂದು ಸುಷ್ಮಾ ಮನವರಿಕೆ ಮಾಡಿಕೊಟ್ಟರು.

ADVERTISEMENT

ಪ್ರಮುಖ ಒಪ್ಪಂದಗಳು: ಭೂಗಡಿ ದಾಟುವಿಕೆ, ಬಗಾನ್‌ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಾಗಳ ಮರುನಿರ್ಮಾಣ ಹಾಗೂ ಸಂರಕ್ಷಣೆ, ಜಂಟಿ ಕದನ ವಿರಾಮ ಮೇಲ್ವಿಚಾರಣಾ ಸಮಿತಿಗೆ ನೆರವು, ಮ್ಯಾನ್ಮಾರ್ ವಿದೇಶಾಂಗ ಸೇವೆ ಅಧಿಕಾರಿಗಳಿಗೆ ತರಬೇತಿ ನೀಡಿಕೆ, ಮೊನಿವಾದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಸಿ) ಸ್ಥಾಪನೆ ಸೇರಿದಂತೆ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಏಳು ಒಪ್ಪಂದಗಳು

* ಭೂಗಡಿ ದಾಟುವಿಕೆ ಕುರಿತ ಒಪ್ಪಂದ

* ಬಗಾನ್‌ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಾಗಳ ಮರುಸ್ಥಾಪನೆ ಹಾಗೂ ಸಂರಕ್ಷಣೆ

* ಜಂಟಿ ಕದನ ವಿರಾಮ ಮೇಲ್ವಿಚಾರಣಾ ಸಮಿತಿಗೆ ನೆರವು

* ಮ್ಯಾನ್ಮಾರ್ ವಿದೇಶಾಂಗ ಸೇವೆ ಅಧಿಕಾರಿಗಳಿಗೆ ತರಬೇತಿ ನೀಡಿಕೆ

* ಮೊನಿವಾದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಸಿ) ಸ್ಥಾಪನೆ

* ಥಾಟನ್‌ನಲ್ಲಿ ಕೈಗಾರಿಕಾ ತರಬೇತಿ ಕೇಂದ್ರ

* ಮಿಂಗ್ಯಾನ್‌ನಲ್ಲಿರುವ ಕೈಗಾರಿಕಾ ತರಬೇತಿ ಕೇಂದ್ರದ ನಿರ್ವಹಣಾ ಒಪ್ಪಂದ ಮುಂದುವರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.