ಕಠ್ಮಂಡು (ಐಎಎನ್ಎಸ್): ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಶನಿವಾರ ಇಳಿದ ತತ್ ಕ್ಷಣವೇ ಇಂಡಿಗೋ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು .
ಆದರೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಬಸ್ ಎ 320 ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನ್ ಹುವಾ ವರದಿ ಮಾಡಿದೆ.
ವಿಮಾನವು ನಿಲ್ದಾಣದಲ್ಲಿ ನೆಲಕ್ಕೆ ಇಳಿದ ತತ್ ಕ್ಷಣವೇ ಬೆಂಕಿ ಕಾಣಿಸಿಕೊಂಡಿತು ಎಂದು ವರದಿ ತಿಳಿಸಿದೆ.
ಬೆಂಕಿಯನ್ನು ತತ್ ಕ್ಷಣವೇ ನಿಯಂತ್ರಿಸಲಾಯಿತು ಎಂದು ಟಿಎಎ ಜನರಲ್ ಮ್ಯಾನೇಜರ್ ರಿಷಿಕೇಶ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಇನ್ನಷ್ಟೇ ಪತ್ತೆ ಮಾಡ ಬೇಕಾಗಿದೆ.
ನೇಪಾಳ ಏರ್ ಲೈನ್ಸ್ ಗೆ ಸೇರಿದ್ದ ಟ್ವಿನ್ ಒಟ್ಟೇರ್ ವಿಮಾನ ಎಂಜಿನ್ನಿನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಕಠ್ಮಂಡು ವಿಮಾನದಲ್ಲಿ ತುರ್ತಾಗಿ ಇಳಿದ ಘಟನೆ ಶುಕ್ರವಾರವಷ್ಟೇ ಸಂಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.