ADVERTISEMENT

ಕಡಲ್ಗಳ್ಳರಿಂದ ಭಾರತೀಯರ ರಕ್ಷಣೆಗೆ ನೈಜೀರಿಯಾ ನೌಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಅಬುಜಾ (ಪಿಟಿಐ): ಕಡಲ್ಗಳ್ಳರ ತಾಣವಾಗಿರುವ ನೈಜರ್ ನದಿ ಮುಖಜ ಭೂಮಿ ಪ್ರದೇಶದಿಂದ ಅಪಹರಣಕ್ಕೊಳಗಾಗಿರುವ ಜರ್ಮನ್ ತೈಲ ಟ್ಯಾಂಕರ್‌ನಲ್ಲಿದ್ದ ಭಾರತೀಯರನ್ನು ಪತ್ತೆಹಚ್ಚಲು ನೈಜೀರಿಯಾ ನೌಕಾಪಡೆ ರಕ್ಷಣಾ ನೌಕೆಯೊಂದನ್ನು ಕಳುಹಿಸಿದೆ.
 
`ಅಪಹರಣಗೊಂಡ ಹಡಗಿನ ಕುರಿತು ಮಾಹಿತಿ ಸಂಗ್ರಹಿಸಲು ರಕ್ಷಣಾ ನೌಕೆಯೊಂದನ್ನು ಕಳುಹಿಸುವಂತೆ ಫ್ಲಾಗ್ ಆಫೀಸರ್- ಕಮಾಂಡರ್ ಅಡ್ಮಿರಲ್ ಅಮೀನ್ ಇಕಿಯೋಡಾ ಆದೇಶಿಸಿದ್ದಾರೆ' ಎಂದು ನೌಕಾಪಡೆಯ ವಕ್ತಾರ ಕಬಿರು ಅಲಿಯು ತಿಳಿಸಿದ್ದಾರೆ.
 
ರಕ್ಷಣಾ ನೌಕೆಯು ಅಪಹೃತ ಹಡಗನ್ನು ಎಲ್ಲಿ ಲಂಗರು ಹಾಕಲಾಗಿದೆ ಎಂಬುದನ್ನು ಪತ್ತೆ ಹಚ್ಚುವುದಲ್ಲದೆ, ಹಡಗು ಅಪಹರಣಗೊಂಡಿರುವುದು ದೃಢವಾದರೆ ರಕ್ಷಣಾ ನೌಕೆ ಕಡಲ್ಗಳ್ಳರ ಬೆನ್ನತ್ತಿ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲಿದೆ ಎಂದು ಅವರು ಹೇಳಿದರು.
 
ಶಸ್ತ್ರಸಜ್ಜಿತರಾಗಿದ್ದ ಕಡಲ್ಗಳ್ಳರು ಸೋಮವಾರ ಜರ್ಮನ್ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿ ಐವರು ಭಾರತೀಯರನ್ನು ಅಪಹರಿಸಿದ್ದರು ಎಂದು ಹಡಗಿನ ನಿರ್ವಾಹಕ ಮೆಡಲಿಯನ್ ಮರೈನ್ ಬುಧವಾರ ತಿಳಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.