ನೈರೋಬಿ (ಎಎಫ್ ಪಿ): ಕೀನ್ಯಾದ ರಾಜಧಾನಿಯ ಕೊಳಚೆ ಪ್ರದೇಶವೊಂದರಲ್ಲಿ ಇಂಧನ ಸಾಗಣೆ ಕೊಳವೆ ಮಾರ್ಗದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 100ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾದ ಘಟನೆ ಸೋಮವಾರ ಸಂಭವಿಸಿದೆ.
~ಸತ್ತವರ ಸಂಖ್ಯೆ 100ಕ್ಕೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ಸತ್ತವರ ಸಂಖ್ಯೆ ಇನ್ನೂ ಹೆಚ್ಚುವ ಸಂಭವ ಇದೆ~ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಥಾಮಸ್ ಅಟೂಟಿ ಹೇಳಿದ್ದಾರೆ.
ನೈರೋಬಿಯ ಲುಂಗಾ ಲುಂಗಾ ಕೈಗಾರಿಕಾ ಪ್ರದೇಶದಲ್ಲಿ ಕೊಳವೆ ಮಾರ್ಗದಲ್ಲಿ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿ ಸಿನಾಯ್ ಕೊಳಚೆ ಪ್ರದೇಶವಿದ್ದು ಜನಸಾಂದ್ರತೆ ಹೆಚ್ಚು ಇದೆ.
ಇಂಧನ ಕೊಳವೆ ಮಾರ್ಗದಲ್ಲಿ ಸೋರಿಕೆ ಇತ್ತು. ಅಲ್ಲಿಂದ ಹೊರಬರುತ್ತಿದ್ದ ಇಂಧನ ಶೇಖರಿಸಿಕೊಳ್ಳಲು ಜನ ಅಲ್ಲಿಗೆ ದೌಡಾಯಿಸುತ್ತಿದ್ದರು~ ಎಂದು ಪ್ರದೇಶದ ನಿವಾಸಿ ಜೋಸೆಫ್ ಮ್ಯೂಗೊ ಹೇಳಿದರು.
~ಇದೇ ವೇಳೆಗೆ ಭಾರೀ ಸ್ಫೋಟದ ಸದ್ದು ಕೇಳಿತು. ಇಡೀ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ತುಂಬಿತು. ಹಲವು ನಿವಾಸಿಗಳು ಬೆಂಕಿಯ ಮಧ್ಯೆ ಸಿಕ್ಕಿ ಹಾಕಿಕೊಂಡರು.~ ಎಂದು ಅವರು ನುಡಿದರು.
ತಾನು ಸ್ವತಃ ಹಲವಾರು ಸುಟ್ಟು ಶವಗಳನ್ನು ಕಂಡುದಾಗಿ ಎಎಫ್ ಪಿ ವರದಿಗಾರ ವರದಿ ಮಾಡಿದ್ದಾರೆ.
2009ರಲ್ಲಿ ಪಶ್ಚಿಮ ಕೀನ್ಯಾದಲ್ಲಿ ಪಲ್ಟಿಯಾಗಿದ್ದ ತೈಲಟ್ಯಾಂಕರ್ ನಿಂದ ಸೋರುತ್ತಿದ್ದ ತೈಲ ಸಂಗ್ರಹ ಮಾಡುತ್ತಿದ್ದ 122 ಮಂದಿ ಇದೇ ಮಾದರಿಯ ಅಗ್ನಿ ಅನಾಹುತದಲ್ಲಿ ಸಿಕ್ಕಿಹಾಕಿಕೊಂಡು ಅಸು ನೀಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.