ADVERTISEMENT

ಕ್ಯಾಲಿಫೋರ್ನಿಯಾದಲ್ಲಿ ನಿಲ್ಲದ ಕಾಳ್ಗಿಚ್ಚು

ತುರ್ತು ಪರಿಸ್ಥಿತಿ ಘೋಷಣೆ * 82 ಸಾವಿರ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
ಕಾಳ್ಗಿಚ್ಚನ್ನು ನಂದಿಸಲು ಯತ್ನಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಕಾಳ್ಗಿಚ್ಚನ್ನು ನಂದಿಸಲು ಯತ್ನಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ   

ಲಾಸ್‌ ಏಂಜಲೀಸ್‌ (ಎಎಫ್‌ಪಿ, ವಾಷಿಂಗ್ಟನ್‌ ಪೋಸ್ಟ್‌):  ಅಮೆರಿಕದ ಲಾಸ್‌ ಏಂಜಲೀಸ್‌ನ ಪೂರ್ವ ಭಾಗದಲ್ಲಿ ತೀವ್ರ ಸ್ವರೂಪದಲ್ಲಿ ಹಬ್ಬುತ್ತಿರುವ ಕಾಳ್ಗಿಚ್ಚಿನ ಕೆನ್ನಾಲಿಗೆ 80 ಅಡಿಗಳಷ್ಟು ಎತ್ತರಕ್ಕೆ ವ್ಯಾಪಿಸಿದ್ದು, 82 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಕ್ಯಾಲಿಫೋರ್ನಿಯಾದ ಗವರ್ನರ್‌ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ಮಂಗಳವಾರ ಅಂತರರಾಜ್ಯ ಹೆದ್ದಾರಿಯುದ್ದಕ್ಕೂ ಸಾಗಿ 28 ಚದರ ಮೈಲಿ ದೂರದವರೆಗೂ ವ್ಯಾಪಿಸಿತು. ಸುಮಾರು 34,500 ಕಟ್ಟಡಗಳು ಅಗ್ನಿಗೆ ಆಹುತಿಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಾಸ್‌ ಏಂಜಲೀಸ್‌ನಿಂದ ಕೇವಲ 100 ಕಿ.ಮೀ. ದೂರದಲ್ಲಿರುವ ಸ್ಯಾನ್ ಬೆರ್ನಾಡಿನೊ ಕೌಂಟಿಯಲ್ಲಿ ಬೆಂಕಿ ನಿಯಂತ್ರಿಸುವುದು ಕಷ್ಟಕರವಾಗಿದೆ. ಪರಿಹಾರ ಕಾರ್ಯಾಚರಣೆ ನಡೆಸಲು ಅನುಕೂಲವಾಗಲೆಂದು ಗವರ್ನರ್‌ ಜೆರ್ರಿ ಬ್ರೌನ್‌ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಮನೆಗಳಲ್ಲಿ ಸ್ಫೋಟ: ಅಪಾಯದ ಮುನ್ಸೂಚನೆ ಸಿಗುತ್ತಲೇ  ಸಾವಿರಾರು ಜನರು ಅಗತ್ಯ ವಸ್ತುಗಳು ಹಾಗೂ ಸಾಕುಪ್ರಾಣಿಗಳೊಂದಿಗೆ ಕಾರಿನಲ್ಲಿ   ಸುರಕ್ಷಿತ ಸ್ಥಳಗಳಿಗೆ ಪ್ರಯಾಣಿಸಿದರು. ಕಾಳ್ಗಿಚ್ಚಿಗೆ ಆಹುತಿಯಾದ ಮನೆಗಳಿಂದ ಸ್ಫೋಟದ ಸದ್ದು ಬಹಳ ದೂರದವರೆಗೂ ಕೇಳಿಸುತ್ತಿತ್ತು.

ಬಹುತೇಕ ಪ್ರದೇಶಗಳಲ್ಲಿ ಬೂದಿಯ ಮಳೆಯಾಗುತ್ತಿರುವಂತೆ ಭಾಸವಾಗುತ್ತಿದ್ದು ಜನರಿಗೆ ಉಸಿರಾಡುವುದು ದುಸ್ತರವಾಗಿದೆ ಎಂದು ಸ್ಥಳೀಯ ರೊಬ್ಬರು ‘ವಾಷಿಂಗ್ಟನ್‌ ಪೋಸ್ಟ್‌’ ಜತೆ ಹೇಳಿಕೊಂಡಿದ್ದಾರೆ.

ರ‍್ಯಾಲಿಲಿಗಳಿಂದಾಗಿ ಮೋಜಿನ ವಾತಾವರಣದಿಂದ ಕೂಡಿರುತ್ತಿದ್ದ ರೈಟ್‌ವುಡ್‌ ಎಂಬ ಪರ್ವತ ಪ್ರದೇಶದ ಪಟ್ಟಣ ಸ್ಮಶಾನವಾಗಿ ಮಾರ್ಪಟ್ಟಿದೆ ಎಂದು ಡ್ಯಾರೆನ್‌ ಡಾಲ್ಟನ್‌ ಎಂಬ ಪರ್ವತಾರೋಹಿ ದುಃಖ ತೋಡಿಕೊಂಡಿದ್ದಾರೆ.

ಲಾಸ್‌ ಏಂಜಲೀಸ್‌ನ ಪೂರ್ವ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಪಶ್ಚಿಮದತ್ತ ವ್ಯಾಪಕವಾಗಿ ಹಬ್ಬಿತು. ಕಾಳ್ಗಿಚ್ಚಿನಿಂದಾದ ಹಾನಿಯನ್ನು ಅಂದಾಜಿಸಲು ಈಗಲೇ ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ. ಮಂಗಳವಾರ ರಾತ್ರಿ ಹಬ್ಬಿದ ಬೆಂಕಿಗೆ 10ಕ್ಕೂ ಅಧಿಕ ಕಟ್ಟಡಗಳು ಕ್ಷಣಮಾತ್ರದಲ್ಲಿ ಆಹುತಿಯಾದವು. ಈ ಪೈಕಿ ಐತಿಹಾಸಿಕ ಹೋಟೆಲ್‌ ಕೂಡಾ ಸೇರಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನ್‌ ಬೆರ್ನಾಡಿನೊ ಪ್ರದೇಶದಲ್ಲಿ  ನಿಯಂತ್ರಣ ಮೀರಿ ಹಬ್ಬುತ್ತಿರುವ ಕಾಳ್ಗಿಚ್ಚಿನಿಂದ 82 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.