ADVERTISEMENT

ಕ್ಷಿಪ್ರ ಪೊಲೀಸ್ ದಂಗೆ: ಮಾಲ್ಡೀವ್ಸ್ ಅಧ್ಯಕ್ಷರ ಹಠಾತ್ ಪದತ್ಯಾಗ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಮಾಲೆ (ಎಪಿ): ಹಿಂದೂ ಮಹಾಸಾಗರದ ಪುಟ್ಟ ಹವಳ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಪೊಲೀಸರು ಮಂಗಳವಾರ ನಾಗರಿಕರ ಜೊತೆ ಸೇರಿ ನಡೆಸಿದ ಕ್ಷಿಪ್ರ ದಂಗೆಯಿಂದಾಗಿ, ಅಧ್ಯಕ್ಷ ಮೊಹಮ್ಮದ್ ನಶೀದ್ ತಮ್ಮ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ಸಲ್ಲಿಸಿದರು. ಉಪಾಧ್ಯಕ್ಷ ಮೊಹಮ್ಮದ್ ವಹೀದ್ ಹಸನ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ನಾಲ್ಕು ವರ್ಷಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದ ನಶೀದ್ ಅವರಿಗೆ, ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಯೊಬ್ಬರ ಬಂಧನಕ್ಕೆ ತಾವು ಹೊರಡಿಸಿದ್ದ ಆದೇಶವೇ ಮುಳುವಾಯಿತು. ಈ ಆದೇಶದ ವಿರುದ್ಧ ಕಳೆದ ಒಂದು ವಾರದಿಂದ ಪ್ರತಿಭಟನೆಯಲ್ಲಿ ತೊಡಗಿದ್ದ ನಾಗರಿಕರ ಜೊತೆ ಮಂಗಳವಾರ ಕೈಜೋಡಿಸಿದ 600ಕ್ಕೂ ಹೆಚ್ಚು ಪೊಲೀಸರು, ಸರ್ಕಾರದ ವಿರುದ್ಧ ತಿರುಗಿಬಿದ್ದರು. ಅಲ್ಲದೆ ಬಹಿರಂಗವಾಗಿಯೇ ಸೇನೆಯ ಜೊತೆ ಘರ್ಷಣೆಗೆ ಇಳಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಒತ್ತಡಕ್ಕೆ ಸಿಲುಕಿದ ನಶೀದ್, ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿದರು. ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಕೂಡಲೇ ವಿವಾದಿತ ನ್ಯಾಯಾಧೀಶರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಇದರಿಂದ, 2008ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಮೊದಲ ಬಹುಪಕ್ಷೀಯ ಚುನಾವಣೆಯಲ್ಲಿ ಗೆದ್ದು ಬಂದು ಸುದೀರ್ಘ ಕಾಲದಿಂದ ರಾಷ್ಟ್ರವನ್ನು ಆಳುತ್ತಾ ಬಂದಿದ್ದ ಮೌಮೂನ್ ಅಬ್ದುಲ್ ಗಯೂಮ್ ಅವರನ್ನು ಕೆಳಕ್ಕಿಳಿಸಿ ಅಧಿಕಾರದ ಗದ್ದುಗೆ ಏರಿದ್ದ ಯುವ ನಾಯಕನ ಯುಗ ಅಂತ್ಯಗೊಂಡಿತು.

ಸುದ್ದಿವಾಹಿನಿಯಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದ ನಶೀದ್, `ದೇಶದ ಜನರ ಸುರಕ್ಷೆ ನನಗೆ ಮುಖ್ಯ. ಪ್ರತಿಭಟನೆಯನ್ನು ಹತ್ತಿಕ್ಕಲು ಸೇನಾ ಬಲಪ್ರಯೋಗ ಮಾಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ಪದತ್ಯಾಗದ ಹೊರತಾಗಿ ಬೇರಾವ ಮಾರ್ಗವೂ ಕಾಣುತ್ತಿಲ್ಲ~ ಎಂದು ಹೇಳಿದರು.

ನಾಗರಿಕರ ವಿಜಯೋತ್ಸವ: ನಶೀದ್ ಅವರ ರಾಜೀನಾಮೆ ವಿಷಯ ತಿಳಿಯುತ್ತಿದ್ದಂತೆಯೇ ನಾಗರಿಕರು ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದರು. ಇನ್ನು ಕೆಲವರು ಪರಸ್ಪರ ನೀರು ಎರಚಾಡಿ ಸಂತಸ ಹಂಚಿಕೊಂಡರು. ಪರಿಸರವಾದಿಯಾಗಿದ್ದ 44 ವರ್ಷದ ನಶೀದ್ ವಿಶ್ವದಾದ್ಯಂತ ಸಂಚರಿಸಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹೋರಾಟಗಳನ್ನು ಉತ್ತೇಜಿಸಿದ್ದರು.

ಜಾಗತಿಕ ತಾಪಮಾನ ಮತ್ತು ಅದರಿಂದ ತಮ್ಮಂತಹ ರಾಷ್ಟ್ರಗಳು ಎದುರಿಸುತ್ತಿರುವ ಆತಂಕಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ನೀರಿನ ಒಳಗೆ ಸಂಪುಟ ಸಭೆ ಆಯೋಜಿಸಿ ವಿಶ್ವದಾದ್ಯಂತ ಸುದ್ದಿ ಮಾಡಿದ್ದರು.
ಅಧ್ಯಕ್ಷರು ಸರ್ಕಾರದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು ಪೊಲೀಸರು ಹಿಡಿತ ಸಾಧಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ನಶೀದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಸ್ಥಳೀಯ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಮಾಲೆಯ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಿದರು.

ಭಾರತೀಯರು ಸುರಕ್ಷಿತ
ನವದೆಹಲಿ(ಪಿಟಿಐ):
ಮಾಲ್ಡೀವ್ಸ್‌ನಲ್ಲಿನ ದಿಢೀರ್ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷವಾಗಿ ಗಮನಿಸುತ್ತಿರುವುದಾಗಿ ಭಾರತ ಹೇಳಿದೆ. ಆದರೆ ಅದು ಆ ದೇಶದ ಆಂತರಿಕ ಬೆಳವಣಿಗೆಯಾಗಿದ್ದು, ಶಾಂತಿಯುತವಾಗಿ ಸಮಸ್ಯೆ ಬಗೆಹರಿಯುತ್ತದೆಂಬ ನಂಬಿಕೆ ಇದೆ; ಹೀಗಾಗಿ ಹೊರಗಿನವರ ನೆರವಿನ ಅಗತ್ಯ ಆ ದೇಶಕ್ಕಿಲ್ಲ ಎಂದು ಹೇಳಿದೆ.
`ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಸುರಕ್ಷಿತವಾಗಿದೆ~ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ಇಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT