ಲಂಡನ್ (ಪಿಟಿಐ): ತಜ್ಞರ ತಂಡದ ಶಿಫಾರಸುಗಳಿಗೆ ಸಂಪುಟದ ಅನುಮತಿ ದೊರೆತರೆ ಅನಿವಾರ್ಯ ಸಂದರ್ಭದಲ್ಲಿ ಗರ್ಭಪಾತಕ್ಕೆ ಸೀಮಿತ ಅವಕಾಶ ಕಲ್ಪಿಸಿಕೊಡುವ ಕಾಯ್ದೆ ಜಾರಿಗೆ ಐರ್ಲೆಂಡ್ ತ್ವರಿತ ಕ್ರಮ ಕೈಗೊಳ್ಳಲಿದೆ. ಭಾರತದ ದಂತವೈದ್ಯೆ ಸವಿತಾ ಹಾಲಪ್ಪನವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎದ್ದಿರುವ ವಿವಾದ ಮತ್ತು ಪ್ರತಿಭಟನೆಗಳ ಬೆನ್ನಲ್ಲಿಯೇ ಸಾರ್ವಜನಿಕ ವೆಚ್ಚ ಮತ್ತು ಸುಧಾರಣಾ ಸಚಿವ ಬ್ರೆಂಡನ್ ಹಾಲಿನ್ ಈ ವಿಷಯ ತಿಳಿಸಿದ್ದಾರೆ.
ಕಾನೂನು ಬದ್ಧ ಗರ್ಭಪಾತ ವಿಷಯವನ್ನು ಯಾವ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸಲು ತಜ್ಞರ ತಂಡ ರಚಿಸಲಾಗಿದೆ. ಗರ್ಭಪಾತಕ್ಕೆ ಸೀಮಿತ ಅವಕಾಶ ನೀಡುವ ಕಾಯ್ದೆಗೆ ಈ ತಂಡವು ಸಮ್ಮತಿ ನೀಡಿದೆ.
`ನಮ್ಮದು ಕ್ಯಾಥೊಲಿಕ್ ದೇಶ' ಎಂಬ ಕಾರಣ ನೀಡಿ ಗರ್ಭಪಾತ ನಡೆಸಲು ನಿರಾಕರಿಸಿದ್ದರ ಪರಿಣಾಮ ಮೈಯಲ್ಲಿ ನಂಜು ಏರಿ ಸವಿತಾ ಅವರು ಅಕ್ಟೋಬರ್ 28ರಂದು ಸಾವನ್ನಪ್ಪಿದ್ದರು.
` ತಜ್ಞರ ತಂಡ ವಿವರ ವರದಿಯನ್ನು ನೀಡಲಿದ್ದು ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಿದೆ' ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರಲ್ಲದೆ ಈ ಕುರಿತಂತೆ ಮುಂದಿನ ವಾರ ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಸುವುದಾಗಿಯೂತಿಳಿಸಿದರು.
ಗರ್ಭಪಾತ ವಿಷಯಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಸಿನ್ ರಿಯನ್ ನೇತೃತ್ವದ ತಂಡದ ವರದಿಯಲ್ಲಿ ಹಲವಾರು ಆಯ್ಕೆಗಳನ್ನು ಪ್ರಸ್ತಾಪಿಸಲಾಗಿದೆ. ಇವುಗಳಲ್ಲಿ ಕಾಯ್ದೆ ಹಾಗೂ ನಿಬಂಧನೆಗಳಿಗೆ ಆದ್ಯತೆ ನೀಡಲಾಗಿದೆ. ಗರ್ಭಪಾತ ನಡೆಸಬಹುದಾದ ವೈದ್ಯಕೀಯ ಕೇಂದ್ರಗಳನ್ನು ಆರೋಗ್ಯ ಸಚಿವರೇ ಗುರುತಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.