ADVERTISEMENT

ಗುರುಗ್ರಹದ ಚಂದ್ರ ಯುರೋಪಾದಲ್ಲಿ ಬೃಹತ್ ಸಾಗರ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2011, 9:50 IST
Last Updated 17 ನವೆಂಬರ್ 2011, 9:50 IST
ಗುರುಗ್ರಹದ ಚಂದ್ರ ಯುರೋಪಾದಲ್ಲಿ ಬೃಹತ್ ಸಾಗರ ಪತ್ತೆ
ಗುರುಗ್ರಹದ ಚಂದ್ರ ಯುರೋಪಾದಲ್ಲಿ ಬೃಹತ್ ಸಾಗರ ಪತ್ತೆ   

ವಾಷಿಂಗ್ಟನ್ (ಐಎಎನ್ಎಸ್): ಗುರುಗ್ರಹದ ಚಂದ್ರ ~ಯುರೋಪಾ~ದ ಮಂಜುಗಡ್ಡೆ ಮೇಲ್ಮೈ ಕೆಳಗೆ ಬೃಹತ್ ಪ್ರಮಾಣದಲ್ಲಿ ನೀರು ಇರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರವನ್ನು ನಾಸಾದ ಗೆಲಿಲಿಯೋ ಬಾಹ್ಯಾಕಾಶ ನೌಕೆ ಪತ್ತೆ ಹಚ್ಚಿದೆ ಎಂದು ಸಂಶೋಧಕರು ಗುರುವಾರ ಹೇಳಿದ್ದಾರೆ.

ಬಾಹ್ಯಾಕಾಶ ನೌಕೆಗೆ ಲಭಿಸಿರುವ ಮಾಹಿತಿಯು ಯುರೋಪಾದ ಮಂಜುಗಡ್ಡೆ ಮೇಲ್ಮೈ ಮತ್ತು ಅದರ ಕೆಳಭಾಗದಲ್ಲಿ ಸಾಗರ ಇರುವುದನ್ನು ಖಚಿತ ಪಡಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಮ್ಮ ಸೌರವ್ಯೂಹ ವ್ಯವಸ್ಥೆಯಲ್ಲಿ ಬೇರೆ ಎಲ್ಲಾದರೂ ಜೀವಿಗಳು ಇರುವ ಸಂಭಾವ್ಯತೆ ಕುರಿತ ವಾದಗಳಿಗೆ ಯುರೋಪಾದಲ್ಲಿ ಪತ್ತೆಯಾಗಿರುವ ಸಾಗರ ಹೆಚ್ಚಿನ ಬಲ ನೀಡಿದೆ ಎಂದು ನಾಸಾವನ್ನು ಉಲ್ಲೇಖಿಸಿ ಕ್ಸಿನ್ಸುವಾ ವರದಿ ಮಾಡಿದೆ.

ಭೂಮಿಯ ಚಂದ್ರನಿಗಿಂದ ಚಿಕ್ಕದಾಗಿರುವ ಯುರೋಪಾದಲ್ಲಿರುವ ಮಂಜುಗಡ್ಡೆಯ ಕೆಳಗೆ ಉಪ್ಪು ನೀರಿನ  ವಿಶಾಲ ಸಾಗರ ಇರಬಹುದು ಎಂದು ನಂಬಲಾಗಿದೆ.

1989ರಲ್ಲಿ ಅಟ್ಲಾಂಟಿಸ್ ಬಾಹ್ಯಾಕಾಶ ಅಟ್ಟೆಯಿಂದ ಉಡಾವಣೆಗೊಂಡ ಗೆಲಿಲಿಯೋ ಬಾಹ್ಯಾಕಾಶ ನೌಕೆಯು ಸೌರ ವ್ಯೂಹದಲ್ಲೇ ಅತಿದೊಡ್ಡ ಗ್ರಹ ಮತ್ತು ಅದರ ಹಲವಾರು ಉಪಗ್ರಹಗಳ ಅಧ್ಯಯನ ನಡೆಸಿದೆ.

ಗೆಲಿಲಿಯೋ ಕಳುಹಿಸಿದ ಹಲವಾರು ಚಿತ್ರಗಳು ಗುರುಗ್ರಹದ ಮೇಲ್ಮೈಯಲ್ಲಿನ ಮಂಜುಗಡ್ಡೆಯಲ್ಲಿ ಬಿರುಕುಗಳು ಇರುವುದನ್ನು ತೋರಿಸಿಕೊಟ್ಟವು. ಈ ಸ್ಥಳದ ಸ್ವರೂಪ ಅಧ್ಯಯನಕ್ಕೆ ಭೂಮಿಯಲ್ಲಿನ ಇದೇ ಮಾದರಿಯ ಪ್ರಕ್ರಿಯೆಯಲ್ಲಿಯೇ ಉತ್ತರವಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು.

ಯುರೋಪಾದ ಮಂಜುಗಡ್ಡೆಯ ಮೇಲ್ಮೈ ಸುಮಾರು 10 ಕಿ.ಮೀ.ಯಷ್ಟು ದಪ್ಪವಿದ್ದು, ಅದರ ಕೆಳಗೆ ಬೃಹತ್ ಗಾತ್ರದ ನೀರಿನ ಸಾಗರ ಸುಮಾರು ಮೂರು ಕಿ,ಮೀ.ಗಳಷ್ಟು ಆಳದಷ್ಟು ಹರಡಿದೆ ಎಂಬುದು ಈ ಅಧ್ಯಯನದಿಂದ ಬೆಳಕಿಗೆ ಬಂತು. ಈ ಸಾಗರ ವಾಸಯೋಗ್ಯ ಕೂಡಾ~ ಎಂದು ಅಧ್ಯಯನ ತಂಡದ ಮುಖ್ಯಸ್ಥ ಬ್ರಿಟ್ನಿ ಸ್ಮಿತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.