ADVERTISEMENT

ಚೀನಾ ಅಧಿಕಾರಿಗಳ ಕ್ರೌರ್ಯಕ್ಕೆ ಆಕ್ರೋಶ

ಬೀಜಿಂಗ್ ವಿಮಾನ ನಿಲ್ದಾಣ ಸ್ಫೋಟ: ನಾಗರಿಕರ ಹೊಸ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ಬೀಜಿಂಗ್ (ಪಿಟಿಐ): ಜನಸಾಮಾನ್ಯರ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗಿದರೆ, ಅವರ ಸಂಕಷ್ಟಗಳನ್ನು ಆಲಿಸದಿದ್ದರೆ ಏನೆಲ್ಲ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದ ಸ್ಫೋಟ ಪ್ರಕರಣವೇ ಸಾಕ್ಷಿ.

ಶಾಂಡಾಂಗ್ ಪ್ರಾಂತ್ಯದ ಮೋಟಾರ್‌ಸೈಕಲ್ ಟ್ಯಾಕ್ಸಿ ಚಾಲಕ  ಜಿ ಜಾಂಕ್ಸಿಂಗ್ ಹುಟ್ಟಿನಿಂದ ಅಂಗವಿಕಲನಾಗಿರಲಿಲ್ಲ. 2005ರಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾಗ ಭದ್ರತಾ ಅಧಿಕಾರಿಗಳು ಈತನನ್ನು ಮನಬಂದಂತೆ ಥಳಿಸಿದರು. ಏಟಿನ ತೀವ್ರತೆಗೆ ಈತನ ಕಾಲುಗಳು ಸ್ವಾಧೀನ ಕಳೆದುಕೊಂಡವು. ಅಲ್ಲಿಂದ ಮುಂದೆ ಜಾಂಕ್ಸಿಂಗ್ ಗಾಲಿ ಕುರ್ಚಿಗೆ ಅಂಟಿಕೊಳ್ಳಬೇಕಾಯಿತು. ಸಿಟ್ಟು ಹಾಗೂ ಅಸಹಾಯಕತೆ ಈತನನ್ನು ಹತಾಶೆಗೆ ದೂಡಿತ್ತು.

ಶನಿವಾರ ಸಂಜೆ ಜಾಂಕ್ಸಿಂಗ್ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ಕೊಠಡಿಯಲ್ಲಿ ಕಾಣಿಸಿಕೊಂಡ. ತನ್ನ ಸಂಕಷ್ಟಗಳನ್ನು ಸಾರ್ವಜನಿಕರ ಮುಂದೆ ಹೇಳಿಕೊಳ್ಳುವ ಉದ್ದೇಶದಿಂದ ಕರಪತ್ರ ಹಂಚತೊಡಗಿದ. ನಂತರದಲ್ಲಿ ತನ್ನ ಬಳಿ ಇದ್ದ ನಾಡ ಬಾಂಬ್ ಸ್ಫೋಟಿಸಿದ. ಈ ಘಟನೆಯಲ್ಲಿ ಈತ ತೀವ್ರವಾಗಿ ಗಾಯಗೊಂಡಿದ್ದಾನೆ.

ಚೀನಾದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ಇದೇ ಮೊದಲೇನೂ ಅಲ್ಲ. ಕಳೆದ ತಿಂಗಳು ಚೆನ್ ಶುಯ್‌ಜಾಂಗ್ (59) ಎಂಬ ವ್ಯಕ್ತಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಹತ್ತಿ ಆತ್ಮಾಹುತಿ ಮಾಡಿಕೊಂಡಿದ್ದ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಈತನ ಜತೆಗೆ ಬಸ್‌ನಲ್ಲಿದ್ದ ಇನ್ನು 46 ಮಂದಿ ಕೂಡ ಪ್ರಾಣ ಕಳೆದುಕೊಂಡರು. ಚೆನ್‌ಗೆ ಸಾಮಾಜಿಕ ಭದ್ರತಾ ವಿಮೆ ಹಣ ಬರಬೇಕಿತ್ತು. ಆದರೆ ಪೊಲೀಸರು ಈತನ ವಯಸ್ಸನ್ನು ತಪ್ಪಾಗಿ ದಾಖಲಿಸಿದ್ದರಿಂದ ಹಣ ಪಡೆಯುವುದಕ್ಕೆ ತೊಡಕಾಯಿತು. ದಾಖಲೆಯಲ್ಲಿ ತನ್ನ ವಯಸ್ಸನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಏನಿಲ್ಲವೆಂದರೂ ಚೆನ್ 56 ಬಾರಿ ಪೊಲೀಸ್ ಠಾಣೆಗೆ ಅಲೆದಾಡಿದ್ದ. ಆದರೂ ಅಧಿಕಾರಿಗಳು ಈತನಿಗೆ ಸೊಪ್ಪು ಹಾಕಲಿಲ್ಲ. ಹತಾಶೆಯಿಂದ ಚೆನ್ ಆತ್ಮಾಹುತಿ ಮಾಡಿಕೊಂಡ.

ಚೀನಾದಲ್ಲಿ ಸಾರ್ವಜನಿಕರ ಮೇಲೆ ಅಧಿಕಾರಿಗಳು ನಡೆಸುವ ದೌರ್ಜನ್ಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ಕಲ್ಲಂಗಡಿ ಹಣ್ಣು ಮಾರುವ ರೈತನೊಬ್ಬ ಸ್ಥಳೀಯ ಪೊಲೀಸರಿಂದ ಥಳಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. ನಿಷೇಧಿತ ವಲಯದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಪೊಲೀಸರು ಡೆಂಗ್ ಜೆಂಗ್‌ಜಿಯಾ ಎಂಬ ರೈತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ನೋವು ತಾಳಲಾರದೆ ಆತ ಪ್ರಾಣ ಬಿಟ್ಟ.

ಈ ಪ್ರಕರಣವನ್ನು ಖಂಡಿಸಿ ಶೆಂಜೌ ನಗರದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಕೂಡಲೇ ಸರ್ಕಾರ ತಪ್ಪಿತಸ್ಥ ಆರು ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿತು. ಅಲ್ಲದೇ ಮೃತನ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿತು. ಸರ್ಕಾರ ತಮ್ಮ ಮೊರೆ ಆಲಿಸುತ್ತಿಲ್ಲ ಎಂಬ ಕಾರಣಕ್ಕೆ ಹತಾಶರಾದ ಜನರು ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಚೀನಾದಲ್ಲಿ ಹೆಚ್ಚಾಗುತ್ತಿದೆ.

`ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವುದು, ಆಸ್ತಿ ಜಪ್ತಿ ಮಾಡುವುದು...ಹೀಗೆ ಅಧಿಕಾರಿಗಳ ಕ್ರೌರ್ಯಕ್ಕೆ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಸಿಟ್ಟಿನಿಂದ ಹಿಂಸೆಗೆ ಇಳಿಯುತ್ತಿದ್ದಾರೆ, ಹತಾಶೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ' ಎಂದು ಮಾನವ ಹಕ್ಕು ಕಣ್ಗಾವಲು ಸಮಿತಿ ವರದಿಯಲ್ಲಿ ಹೇಳಲಾಗಿದೆ.

ದೌರ್ಜನ್ಯಕ್ಕೆ ರೋಸಿದವರು..
`ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವುದು, ಆಸ್ತಿ ಜಪ್ತಿ ಮಾಡುವುದು...ಹೀಗೆ ಅಧಿಕಾರಿಗಳ ಕ್ರೌರ್ಯಕ್ಕೆ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಸಿಟ್ಟಿನಿಂದ ಹಿಂಸೆಗೆ ಇಳಿಯುತ್ತಿದ್ದಾರೆ, ಹತಾಶೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ' ಎಂದು ಮಾನವ ಹಕ್ಕು ಕಣ್ಗಾವಲು ಸಮಿತಿ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT