ADVERTISEMENT

ಚೀನಾ ಭೂಕಂಪನ: 89 ಸಾವು

ಸಾವಿರಾರು ಮನೆಗಳು ನೆಲಸಮ, 500 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST
ಚೀನಾದ ಗನ್ಸು ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯೊಂದರ ಮುಂಭಾಗದಲ್ಲೇ ಚಿಕಿತ್ಸೆ ನೀಡಲಾಯಿತು 	-ಎಪಿ ಚಿತ್ರ
ಚೀನಾದ ಗನ್ಸು ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯೊಂದರ ಮುಂಭಾಗದಲ್ಲೇ ಚಿಕಿತ್ಸೆ ನೀಡಲಾಯಿತು -ಎಪಿ ಚಿತ್ರ   

ಬೀಜಿಂಗ್ (ಪಿಟಿಐ): ಚೀನಾದ ಈಶಾನ್ಯ ಭಾಗದ ಗನ್ಸು ಪ್ರಾಂತ್ಯದ ಮಿನಿಕ್ಸಿಯನ್ ಮತ್ತು ಝಾಂಗ್‌ಕ್ಸಿನ್‌ನಲ್ಲಿ  ಸೋಮವಾರ ಬೆಳಿಗ್ಗೆ  ಸಂಭವಿಸಿದ ಪ್ರಬಲ ಭೂಕಂಪನಕ್ಕೆ 89 ಜನರು ಬಲಿಯಾಗಿದ್ದು 500ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಹಾಗೂ 20 ಸಾವಿರ ಮನೆಗಳು ನೆಲಸಮಗೊಂಡಿವೆ.

ರಿಕ್ಟರ್ ಮಾಪನದಲ್ಲಿ 6.6ರಷ್ಟು ಮತ್ತು 5.6ರಷ್ಟು ಇದ್ದ ಭೂಕಂಪನದ ಕೇಂದ್ರ ಬಿಂದು 20 ಕಿ. ಮೀ ಆಳದಲ್ಲಿ ಮತ್ತು ಗನ್ಸು ಪ್ರಾಂತ್ಯದ ರಾಜಧಾನಿ ಲೆಂಜ್‌ಹೌನಿಂದ 170 ಕಿ. ಮೀ. ದೂರದಲ್ಲಿ ಇತ್ತು ಎಂದು ಭೂಕಂಪನ ನಿಗಾ ಕಚೇರಿಯ ಮೂಲಗಳು ತಿಳಿಸಿವೆ.

ಟಿಬೆಟ್ ಸಮೀಪ ಸಂಭವಿಸಿರುವ ಈ ಪ್ರಬಲ ಭೂಕಂಪನದಿಂದ ಭೂಕುಸಿತ ಉಂಟಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಮೊದಲ ಕಂಪನವು ಬೆಳಿಗ್ಗೆ 7.45ಕ್ಕೆ ಸಂಭವಿಸಿದೆ. ಸುಮಾರು ಒಂದು ನಿಮಿಷ ಭೂಮಿ, ಕಟ್ಟಡ ಮತ್ತು ಮರಗಿಡಗಳು ತೀವ್ರವಾಗಿ ಅದುರಿದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಿಗ್ಗೆ 9.12ಕ್ಕೆ ಮತ್ತೊಂದು ಬಾರಿ ಭೂಮಿ ಜೋರಾಗಿ ಕಂಪಿಸಿರುವುದರಿಂದ ಹಾನಿಯ ಪ್ರಮಾಣ ದೊಡ್ಡದಾಗಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಎರಡು ಕಂಪನದ ನಂತರ ಭೂಮಿ 400 ಬಾರಿ ಸಣ್ಣದಾಗಿ ಅದುರಿದೆ. ಭೂಕಂಪನದ ರಭಸಕ್ಕೆ 5,600 ಮನೆಗಳ 21 ಸಾವಿರ ಕೊಠಡಿಗಳಿಗೆ ಹಾನಿಯಾಗಿದ್ದು, 1,203 ಕೊಠಡಿಗಳು ನೆಲಸಮವಾಗಿವೆ. 2000 ಮನೆಗಳು ಸಂಪೂರ್ಣ ನೆಲಸಮವಾಗಿವೆ.

ಝಾಂಗ್‌ಕ್ಸಿನ್ ಪ್ರಾಂತ್ಯದ 13 ಪಟ್ಟಣಗಳಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ಈ ಪ್ರಾಂತ್ಯದ ಬಹುತೇಕ ಪಟ್ಟಣಗಳು ಹಾನಿಗೊಳಗಾಗಿದ್ದು, ಮೈಚುವಾನ್ ಮತ್ತು ಪುಮಾ ಪಟ್ಟಣಗಳಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಡಿಂಗ್ಸಿಯಲ್ಲಿ 87 ಜನರು ಮತ್ತು ಪಕ್ಕದ ಲೊಂಗನಾನ್‌ನಲ್ಲಿ ಇಬ್ಬರು ಭೂಕಂಪಕ್ಕೆ ಬಲಿಯಾಗಿದ್ದಾರೆ. ಐದು ಜನರು ನಾಪತ್ತೆಯಾಗಿದ್ದಾರೆ. ಗಾಯಗೊಂಡಿರುವವರ ಪೈಕಿ 60 ಜನರ ಸ್ಥಿತಿ ಚಿಂತಾಜನಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.