ಕ್ಯೋಟೊ (ಜಪಾನ್): ಜಪಾನಿಗೆ ಒಂದೆಡೆ ಅಪಾರ ಸಾವು, ನೋವು, ವಿಕಿರಣ ಭೀತಿ ಹಾಗೂ ಆರ್ಥಿಕ ನಷ್ಟ ಎಸಗಿರುವ ವಿಧ್ವಂಸಕ ಸುನಾಮಿ ಮತ್ತೊಂದೆಡೆ ನೆರೆ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಣೆಗೂ ಅವಕಾಶದ ಬಾಗಿಲು ತೆರೆದಿದೆ. ಕ್ಯೋಟೊದಲ್ಲಿ ಭಾನುವಾರ ನಡೆದ ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾಗಳ ವಿದೇಶಾಂಗ ಸಚಿವರ ಒಂದು ದಿನದ ಸಭೆಯಲ್ಲಿ ಈ ಸುಳಿವು ಕಂಡುಬಂತು.
ಜಪಾನ್ ಈ ಎರಡೂ ರಾಷ್ಟ್ರಗಳೊಂದಿಗೆ ಗಡಿ ತಂಟೆಯ ವಿವಾದ ಹೊಂದಿದೆ. ಹೀಗಾಗಿ ಈ ಎರಡು ರಾಷ್ಟ್ರಗಳೊಂದಿಗಿನ ಜಪಾನ್ ಸಂಬಂಧ ಮಧುರವಾಗೇನೂ ಇಲ್ಲ. ಸಾಮಾನ್ಯವಾಗಿ ಈ ರಾಷ್ಟ್ರಗಳು ಪರಸ್ಪರ ಚರ್ಚಿಸಿದಾಗಲೆಲ್ಲಾ ಅದು ತಗಾದೆಯಲ್ಲೇ ಮುಕ್ತಾಯವಾಗುತ್ತದೆ. ಆದರೆ ಈ ಬಾರಿಯ ಸಭೆಯಲ್ಲಿ ಅಂತಹ ವಾತಾವರಣವೇ ಇರಲಿಲ್ಲ. ಬದಲಾಗಿ ಜಪಾನಿಗೆ ಒದಗಿರುವ ಸಂಕಷ್ಟದ ಬಗ್ಗೆ ನೆರೆಯ ರಾಷ್ಟ್ರಗಳ ಸಚಿವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ದುರಂತದಲ್ಲಿ ಮೃತರಾದವರನ್ನು ನೆನೆದು ಮೌನ ಪ್ರಾರ್ಥನೆಯನ್ನೂ ಸಲ್ಲಿಸಿದರು.ಜಪಾನಿನಲ್ಲಿ ಸಂಭವಿಸಿರುವ ಅವಘಡವನ್ನು ತಮ್ಮ ಜನತೆ ತಮ್ಮ ನಾಡಿನಲ್ಲೇ ಸಂಭವಿಸಿದ ದುರಂತವೆಂದು ಭಾವಿಸಿರುವುದಾಗಿಯೂ ಈ ಸಚಿವರು ಹೇಳಿದರು. ಇದೇ ಸಂದರ್ಭವನ್ನು ಬಳಸಿಕೊಂಡು ಜಪಾನ್ ನೆರೆ ರಾಷ್ಟ್ರಗಳ ಜತೆಗಿನ ಸಂಬಂಧ ಸುಧಾರಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕಲು ಸಾಧ್ಯವಿದೆ ಎಂಬುದು ವಿದೇಶಾಂಗ ಪರಿಣತರ ನಿರೀಕ್ಷೆ. ಇದು ನಿಜವಾಗುತ್ತದೋ ಅಥವಾ ಹುಸಿಯಾಗುತ್ತದೋ ಎಂಬುದು ಮೇ ತಿಂಗಳಲ್ಲಿ ನಡೆಯಲಿರುವ ಮೂರೂ ರಾಷ್ಟ್ರಗಳ ತ್ರಿಪಕ್ಷೀಯ ಸಭೆಯಲ್ಲಿ ಸ್ಪಷ್ಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.