ಟೋಕಿಯೊ (ಎಎಫ್‌ಪಿ): ಸಾರ್ವಜನಿಕ ಪಿಂಚಣಿ ಸೇವಾ ವ್ಯವಸ್ಥೆಯಲ್ಲಿ 2007ರಲ್ಲಿ ನಡೆದ ಭಾರಿ ಅಕ್ರಮದಿಂದಾಗಿ ಭಾರಿ ತೊಂದರೆ ಅನುಭವಿಸಿದ್ದ ಜಪಾನ್ ಅದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಪಿಂಚಣಿ ವ್ಯವಸ್ಥೆಗೆ ಮತ್ತೆ ಕನ್ನ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಇದರ ಪರಿಣಾಮ ಕನಿಷ್ಠ 10.25 ಲಕ್ಷ ಪಿಂಚಣಿದಾರರ ವೈಯಕ್ತಿಕ ಅಂಕಿ-ಅಂಶಗಳು ಸೋರಿಕೆಯಾಗಿವೆ ಎನ್ನಲಾಗಿದೆ.
ನೌಕರನೊಬ್ಬ ವೈರಸ್ ಒಳಗೊಂಡಿದ್ದ ಇ–ಮೇಲ್‌ವೊಂದನ್ನು ತೆರೆಯುತ್ತಿದ್ದಂತೆ ಪಿಂಚಣಿದಾರರ ಹೆಸರು, ವಿಳಾಸ, ಖಾತೆ ಸಂಖ್ಯೆ, ಜನ್ಮ ದಿನಾಂಕ ಮತ್ತಿತರ ವೈಯಕ್ತಿಕ ವಿವರಗಳನ್ನು ಒಳಗೊಂಡ ದಾಖಲೆಗಳು ಹಾನಿಗೊಳಗಾದವು ಎಂದು ಪಿಂಚಣಿ ಸೇವಾ ಕಚೇರಿ ತಿಳಿಸಿದೆ. ಘಟನೆ ಕಳೆದ ವಾರ ಬೆಳಕಿಗೆ ಬಂದಿದ್ದು ತಕ್ಷಣವೇ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಕೋರಲಾಗಿದೆ ಎಂದು ಜಪಾನ್ ನಿವೃತ್ತಿ ಸೇವೆಗಳ ಅಧ್ಯಕ್ಷ ಟೊಯಿಚಿರೊ ಮಿಜುಷಿಮಾ ಮಾಧ್ಯಮಗಳಿಗೆ ತಿಳಿಸಿದರು.
ವೈರಾಣುಗಳ ದಾಳಿಗೆ ತುತ್ತಾಗಿರುವ ಕಂಪ್ಯೂಟರ್‌ನಿಂದ ಇತರ ಕಂಪ್ಯೂಟರ್ಗಳಿಗೂ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಆದರೆ ಪಿಂಚಣಿದಾರರ ಹಣಕಾಸು ಮತ್ತು ಔದ್ಯೋಗಿಕ ದಾಖಲೆಒಳಗೊಂಡ ಕೋರ್ ಕಂಪ್ಯೂಟರ್ ವ್ಯವಸ್ಥೆಗೇ ಹಾನಿಯಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಹಾನಿಗೊಂಡಿರುವ ಖಾತೆ ಸಂಖ್ಯೆಗಳನ್ನು ಬದಲಾಯಿಸಲಾಗುವುದು. ಅಲ್ಲದೆ ಘಟನೆಯ ತನಿಖೆಯನ್ನೂ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು. ಜಗತ್ತಿನಲ್ಲೇ ಅತಿ ದೊಡ್ಡದಾದ, ಜಪಾನ್‌ನ ಸಾರ್ವಜನಿಕ ಪಿಂಚಣಿ ವ್ಯವಸ್ಥೆಯಲ್ಲಿ 2007ರಲ್ಲಿ ನಡೆದ ಭಾರಿ ಅಕ್ರಮದಿಂದಾಗಿ 5 ಕೋಟಿ ಪಿಂಚಣಿದಾರರ ದಾಖಲೆಗಳನ್ನು ಸರ್ಕಾರ ಕಳೆದುಕೊಂಡಿತ್ತು. ಈ ಘಟನೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವಾಗಲೇ ಸರ್ಕಾರದ ಮೇಲೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.