ADVERTISEMENT

ಟೈಟಾನಿಕ್ ನೆನಪು...

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಲಂಡನ್ (ಪಿಟಿಐ): “ಅಬ್ಬಾ ನಾವೆಲ್ಲಾ ಪವಾಡ ಸದೃಶವಾಗಿ ಬದುಕುಳಿದು ಬಂದೆವು” ಇಂತಹದೊಂದು ಉದ್ಘಾರವನ್ನು ಗೋವಾ ನಿವಾಸಿ ಜಾನ್ ಫರ್ನಾಂಡಿಸ್ `ಸಂಡೇ ಅಬ್ಸರ್ವರ್~ ಪತ್ರಿಕೆಗೆ ವಿವರಿಸುವಾಗ ಅವರ ಕಣ್ಣಲ್ಲಿ ಮರುಜನ್ಮದ ಪಲಕುಗಳು ಮಿಂಚುತ್ತಿದ್ದವು.


ಶನಿವಾರ ಬೆಳಿಗ್ಗೆ ಇಟಲಿಯ ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ `ಕೊಸ್ಟಾ ಕಾನ್‌ಕಾರ್ಡಿಯಾ~ ಹಡಗು ಬಂಡೆಗೆ ಡಿಕ್ಕಿ ಹೊಡೆದಾಗ ಭಾರಿ ಅನಾಹುತದಿಂದ ಸ್ವಲ್ಪವೇ ಅಂತರದಲ್ಲಿ ಪಾರಾಯಿತು ಎಂದು ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ 28 ವರ್ಷದ ಜಾನ್ ಫರ್ನಾಂಡೀಸ್, `ನಿಜವಾಗಿಯೂ ಆ ಕ್ಷಣಗಳು `ಟೈಟಾನಿಕ್ ದುರಂತ~ವನ್ನು ನೆನಪಿಗೆ ತಂದವು~ ಎಂದು ನಿಟ್ಟುಸಿರು ಬಿಟ್ಟರು. ಫರ್ನಾಂಡೀಸ್ ಈ ಹಡಗಿನಲ್ಲಿ ರೆಸ್ಟಾರೆಂಟ್‌ನ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

`ಒಂದು ವೇಳೆ ಹಡಗು ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲೇನಾದರೂ ಈ ಅವಘಡಕ್ಕೆ ಈಡಾಗಿದ್ದರೆ ಅಥವಾ ಇನ್ನೂ ಸ್ವಲ್ಪ ತಡವಾಗಿ ಈ ದುರಂತ ಅರಿವಿಗೆ ಬಂದ್ದ್ದಿದೇ ಆದರೆ ಮುಂದಿನ ಅನಾಹುತ ಕಲ್ಪಿಸಿಕೊಳ್ಳಲಿಕ್ಕೇ ಸಾಧ್ಯವಿರುತ್ತಿರಲಿಲ್ಲ~ ಎಂದು ಅವರು ಆ ಭೀಕರ ನೆನಪನ್ನು ಮೆಲುಕು ಹಾಕಿದರು.

`ಒಮ್ಮಿಂದೊಮ್ಮೆಲೇ ಹಡಗಿನಲ್ಲಿ ಭಾರಿ ಶಬ್ದ ಕೇಳಿದಂತಾಯಿತು. ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿಯೇ ಅದೇ ಶಬ್ದ ಮರುಕಳಿಸಿತು. ಕ್ಷಣಾರ್ಧದಲ್ಲಿ ಹಡಗಿನ ಎಲ್ಲಾ ದೀಪಗಳೂ ನಂದಿ ಹೋದವು. ನಿಯಂತ್ರಣ ಕೊಠಡಿಯಿಂದ ಧ್ವನಿವರ್ಧಕದಲ್ಲಿ ಪ್ರಯಾಣಿಕರಿಗೆ ಆತಂಕದ ಸೂಚನೆಗಳು ತೇಲಿ ಬರತೊಡಗಿದವು. “ಕೂಡಲೇ ಎಲ್ಲರೂ ಜಮಾವಣೆಯ ತಾಣದಲ್ಲಿ ಸೇರತಕ್ಕದ್ದು” ಎಂದು ತುರ್ತು ಘೋಷಣೆಯನ್ನು ಹೊರಡಿಸಲಾಯಿತು. ನಾವೆಲ್ಲಾ ಭಯದಿಂದ ಜಮಾವಣೆಯ ಸ್ಥಳಕ್ಕೆ ಧಾವಿಸಿದೆವು.

ಅಲ್ಲಿಗೆ ಹೋದ ಹತ್ತು ನಿಮಿಷದಲ್ಲೇ ಪ್ರಯಾಣಿಕರೆಲ್ಲರೂ ಹಡಗನ್ನು ತ್ಯಜಿಸಲು ಸಿದ್ಧರಾಗುವಂತೆ ಸೂಚಿಸಲಾಯಿತು. ಪ್ರತಿಯೊಬ್ಬರೂ ಭಯದಿಂದಲೇ ಜೀವರಕ್ಷಕ ಕವಚಗಳನ್ನು ಧರಿಸಿದೆವು. ಅತೀವ ದಿಗಿಲಿನಲ್ಲಿ ಚಡಪಡಿಸುತ್ತಿದ್ದಂತೆಯೇ ಹಡಗು ನಿಧಾನವಾಗಿ ನೀರಿನಲ್ಲಿ ಒಂದು ಕಡೆ ವಾಲುವುದಕ್ಕೆ ಆರಂಭಿಸಿತು. ಏನಾಗುತ್ತಿದೆ ಎಂಬುದು ನಿಧಾನವಾಗಿ ನಮಗೆ ತಿಳಿಯಲಾರಂಭಿಸಿತು.

ಹಡಗು ಒಂದು ಬದಿಗೆ ವಾಲುತ್ತಿದ್ದಂತೆ ಮುಳುಗುವ ಭಾಗದಲ್ಲಿದ್ದವರು ಜೀವರಕ್ಷಕ ಕವಚಗಳನ್ನು ಧರಿಸಲು ಆಗಲೇ ಇಲ್ಲ. ಬೇರೆ ದಾರಿಯಿಲ್ಲದೆ ಅವರಲ್ಲಿ ಕೆಲವರು ನೀರಿಗೆ ಹಾರಿದರೂ ಬದುಕುಳಿದಿದ್ದಾರೆ~ ಎಂದು ಜಾನ್ ವಿವರಿಸಿದ್ದಾರೆ.

ಹಡಗಿನಲ್ಲಿ 3,206 ಪ್ರಯಾಣಿಕರು ಮತ್ತು 1,023 ಸಿಬ್ಬಂದಿ ಇದ್ದರು.  ಹಡಗಿನ ಕ್ಯಾಪ್ಟನ್ ಅನ್ನು ಈಗ ಬಂಧಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT