ADVERTISEMENT

ಟ್ರಂಪ್ – ಹಿಲರಿ ದಾಖಲೆ ಸಂವಾದ

ಪಿಟಿಐ
Published 28 ಸೆಪ್ಟೆಂಬರ್ 2016, 19:30 IST
Last Updated 28 ಸೆಪ್ಟೆಂಬರ್ 2016, 19:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ನ್ಯೂಯಾರ್ಕ್: ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸೋಮವಾರ ನಡೆದ ಮೊದಲನೇ ಸಂವಾದ ದಾಖಲೆ ನಿರ್ಮಿಸಿದೆ.

ಸಂವಾದನ್ನು 8.4 ಕೋಟಿ ಜನ ವೀಕ್ಷಿಸಿದ್ದಾರೆ. ಇದರಿಂದ 36 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ. 1980ರಲ್ಲಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ರೊನಾಲ್ಡ್ ರೇಗನ್ ನಡುವೆ ನಡೆದಿದ್ದ ಸಂವಾದವನ್ನು 8.06 ಕೋಟಿ ಜನ ವೀಕ್ಷಿಸಿದ್ದರು.

‘ರಿಯಾಲಿಟಿ ಷೋ ಅಲ್ಲ’: ‘ಶ್ವೇತಭವನಕ್ಕಾಗಿನ ತಮ್ಮ ಸ್ಪರ್ಧೆ ನೈಜವಾದದ್ದೇ ವಿನಃ ಟಿವಿ ರಿಯಾಲಿಟಿ ಷೋ ಅಲ್ಲ’ ಎಂದು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಹಿಲರಿ ಈ ಹೇಳಿಕೆ ನೀಡಿದ್ದಾರೆ.

ಉತ್ತರ ಕೆರೊಲಿನಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಹಿಲರಿ, ‘ಇದು ಟಿವಿ ರಿಯಾಲಿಟಿ ಅಲ್ಲ. ನೈಜವಾದದ್ದು. ನಾವು ಎಲ್ಲರಿಗಾಗಿ ಕೆಲಸ ಮಾಡಲು ಮುಂದಾಗಿದ್ದೇವೆಯೇ ಹೊರತು ಉನ್ನತ ಸ್ಥಾನದಲ್ಲಿರುವವರಿಗೆ ಮಾತ್ರವಲ್ಲ’ ಎಂದರು.

‘ನಾವು ಅಮೆರಿಕದ ಜನತೆಯನ್ನು ಒಂದುಗೂಡಿಸಲು, ಸ್ಥಿರ ನಾಯಕತ್ವ ನೀಡಲು ಹಾಗೂ ದೇಶವನ್ನು ಸುರಕ್ಷಿತವಾಗಿಸಲು ಮುಂದಾಗುತ್ತಿದ್ದೇವೆ’ ಎಂದು ಅವರು ಹೇಳಿದರು. ಮಿತ್ರ ರಾಷ್ಟ್ರಗಳ ಜೊತೆಗಿನ ವಚನಬದ್ಧತೆಯನ್ನು ಗೌರವಿಸುವುದಿಲ್ಲ ಎಂದು ಟ್ರಂಪ್ ಸಂವಾದದಲ್ಲಿ ಹೇಳಿದ್ದಾಗಿ ಹಿಲರಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.