ADVERTISEMENT

ತಡರಾತ್ರಿ ಮಲಗಿದರೆ ಆಯಸ್ಸು ಕ್ಷೀಣಿಸಲಿದೆ !

ಸರ್ರೆ ಮತ್ತು ನಾರ್ತ್‌ವೆಸ್ಟರ್ನ್‌ ವಿ.ವಿ ಅಧ್ಯಯನ

ಪಿಟಿಐ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ತಡರಾತ್ರಿ ಮಲಗಿದರೆ ಆಯಸ್ಸು ಕ್ಷೀಣಿಸಲಿದೆ !
ತಡರಾತ್ರಿ ಮಲಗಿದರೆ ಆಯಸ್ಸು ಕ್ಷೀಣಿಸಲಿದೆ !   

ಲಂಡನ್‌: ತಡರಾತ್ರಿ ಮಲಗಿ ಬೆಳಿಗ್ಗೆ ನಿಧಾನವಾಗಿ ಏಳುವವರು, ಬೇಗ ಮಲಗಿ ಬೇಗ ಏಳುವವರಿಗಿಂತ ಆರೂವರೆ ವರ್ಷ ಮೊದಲೇ ಸಾವನ್ನಪ್ಪುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಇಂಗ್ಲೆಂಡ್‌ನ ಸರ್ರೆ ವಿಶ್ವವಿದ್ಯಾಲಯ ಮತ್ತು ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಂಶೋಧಕರು, ಯುಕೆ ಬಯೊಬ್ಯಾಂಕ್‌ನಲ್ಲಿ ಸುಮಾರು 5 ಲಕ್ಷ ಜನರ ಮಲಗುವ ಮತ್ತು ಏಳುವ ಸಮಯವು ಅವರ ಜೀವಿತಾವಧಿ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಅಧ್ಯಯನ ಮಾಡಿದ್ದಾರೆ.

ಇದರಲ್ಲಿ ಶೇಕಡ 10ರಷ್ಟು ಮಂದಿಗೆ ಹೆಚ್ಚು ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಅಧ್ಯಯನ ವರದಿ ತಿಳಿಸಿದೆ. ಈ ವರದಿ ‘ಕ್ರೋನೊಬಯಾಲಜಿ ಇಂಟರ್‌ನ್ಯಾಷನಲ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ADVERTISEMENT

‘ಮಲಗುವ ಮತ್ತು ಏಳುವ ಸಮಯಕ್ಕೂ, ಜೈವಿಕ ಚಕ್ರಕ್ಕೂ ಸಂಬಂಧವಿದೆ. ಈ ಚಕ್ರವು ಮನುಷ್ಯನ ಬಾಹ್ಯ ಚಟುವಟಿಕೆಗಳ ಜತೆ ಹೊಂದಿಕೆಯಾಗುವುದಿಲ್ಲ. ಸೂರ್ಯೋದಯ ಮತ್ತು ಸೂರ್ಯಾಸ್ತದ ಅನುಸಾರವಾಗಿ ಮಾನವ ದೇಹ ಕಾರ್ಯ ನಿರ್ವಹಿಸುತ್ತದೆ. ಆದರೆ ಸಂಜೆಯ ವೇಳೆ ಕೆಲಸ ಆರಂಭಿಸಿ, ತಡರಾತ್ರಿ ಮಲಗುವವರಿಗೆ ಮಧುಮೇಹ, ಮಾನಸಿಕ ಕಾಯಿಲೆಗಳು ಮತ್ತು ನರಸಂಬಂಧಿ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದು ವಿಶ್ವವಿದ್ಯಾಲಯದ ಅಧ್ಯಾಪಕ ಮಾಲ್ಕಂ ವಾನ್ ಚಾಂಜ್‌ ವಿವರಿಸಿದ್ದಾರೆ.

‘ಮಾನಸಿಕ ಒತ್ತಡ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ವ್ಯಾಯಾಮದ ಕೊರತೆ, ನಿದ್ರಾಹೀನತೆ, ಮದ್ಯ ಅಥವಾ ಮಾದಕ ವಸ್ತುಗಳ ಬಳಕೆ, ತಡರಾತ್ರಿವರೆಗೂ ಎಚ್ಚರವಿರುವುದು ಮುಂತಾದ ಅನಾರೋಗ್ಯಕರ ಅಭ್ಯಾಸಗಳಿಂದ ತಡವಾಗಿ ಏಳುವಂತಾಗುತ್ತದೆ’ ಎಂದು ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕ್ರಿಸ್ಟನ್‌ ನಟ್ಸನ್‌ ತಿಳಿಸಿದ್ದಾರೆ.

ಮಲಗುವ ಮತ್ತು ಏಳುವ ಅಭ್ಯಾಸಕ್ಕೆ ವಂಶವಾಹಿಗಳು ಮತ್ತು ಪರಿಸರ ಮುಖ್ಯ ಕಾರಣ. ಬೇಗ ಎದ್ದು ಬೇಗ ಮಲಗುವುದು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದು ನಟ್ಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.