
ಲಂಡನ್ (ಎಎಫ್‌ಪಿ): ಥೇಮ್ಸ್ ನದಿಯಲ್ಲಿ ಸೋಮವಾರ ಉಕ್ಕಿಬಂದ ಭಾರಿ ಪ್ರವಾಹದಿಂದಾಗಿ ಸಾವಿರಾರು ಮನೆಗಳು ಜಲಾವೃತಗೊಂಡಿದ್ದು, ಎರಡನೇ ಎಲಿಜಬೆತ್ ರಾಣಿಯ ಅರಮನೆ ಇರುವ ಎತ್ತರದ ಗ್ರೇಟ್ ವಿಂಡ್ಸರ್ ಪಾರ್ಕ್ ಕೂಡಾ ನಡುಗಡ್ಡೆಯಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಹೊರತಾಗಿಯೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಥೇಮ್ಸ್ ನದಿಯ ಪ್ರವಾಹ ಬ್ರಿಟನ್ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಸರ್ಕಾರ ಅಗತ್ಯಕ್ಕಿಂತ ಹೆಚ್ಚಾಗಿ ಹವಾಮಾನ ಇಲಾಖೆಯ ವರದಿಗಳ ಮೇಲೆ ಅವಲಂಬಿತವಾಗಿದ್ದು ಪರಿಸ್ಥಿತಿ ಬಿಗಡಾಯಿಸಲು ಕಾರಣ ಎಂದು ಸಚಿವ ಎರಿಕ್ ಪಿಕಲ್ಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಪರಿಸ್ಥಿತಿ ನಿರ್ವಹಣೆಗೆ ತಜ್ಞರ ನೆರವು ಪಡೆಯಲಾಗುತ್ತಿದೆ ಎಂದು ಪ್ರಧಾನಿ ಡೇವಿಡ್ ಕ್ಯಾಮೆರಾನ್ ತಿಳಿಸಿದ್ದಾರೆ. ಸಚಿವರಿಗೆ ತಿರುಗೇಟು ನೀಡಿರುವ ಹವಾಮಾನ ಇಲಾಖೆಯ ಮುಖ್ಯಸ್ಥ ಕ್ರಿಸ್ ಸ್ಮಿತ್, ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಕೆಲವು ದಿನಗಳಿಂದ ಬೀಸುತ್ತಿರುವ ಭಾರಿ ಬಿರುಗಾಳಿ ಮತ್ತು ಶೀತಗಾಳಿ ಗಳಿಂದಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಥೇಮ್ಸ್ ತುಂಬಿ ಹರಿಯುತ್ತಿದೆ. ಭೋರ್ಗರೆಯುತ್ತಿರುವ ಆಳೆತ್ತರದ ಅಲೆಗಳು ತಡೆಗೋಡೆಗಳನ್ನು ದಾಟಿ ಬರುತ್ತಿವೆ.
ಹವಾಮಾನ ಇಲಾಖೆ ಪ್ರವಾಹ ಸಾಧ್ಯತೆ ಕುರಿತು 14 ಬಾರಿ ಮುನ್ನೆಚ್ಚರಿಕೆ ನೀಡಿತ್ತು. ಪಶ್ಚಿಮ ಭಾಗದಲ್ಲಿರುವ ಸರ್ರೆ ಮತ್ತು ಬರ್ಕ್‌ಶೈರ್ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮುನ್ಸೂಚನೆ ನೀಡಿತ್ತು.
ಧಾರಾಕಾರ ಮಳೆ ಮುಂದುವರೆಯಲಿದ್ದು ಥೇಮ್ಸ್ ನದಿಯ ಪ್ರವಾಹಕ್ಕೆ ಕಡಿವಾಣ ಹಾಕುವುದು ಕಷ್ಟ ಎಂದು ಹವಾಮಾನ ಇಲಾಖೆ ಹೇಳಿದೆ. 1766ರ ನಂತರ ಬ್ರಿಟನ್‌ನಲ್ಲಿ ಕಾಣಿಸಿಕೊಂಡ ದೊಡ್ಡ ಪ್ರವಾಹ ಇದಾಗಿದೆ.
ರಾಜಧಾನಿ ಲಂಡನ್‌ನ ದಕ್ಷಿಣಕ್ಕಿರುವ ಕ್ರಾಯ್‌ಡಾನ್‌ನಲ್ಲಿ ಪ್ರವಾಹ ಅಂಗಡಿ ಮತ್ತು ಮನೆಗಳಿಗೆ ನುಗ್ಗಿದ್ದು, ಪಂಪ್‌ಸೆಟ್‌ಗಳ ಮೂಲಕ ನೀರನ್ನು ಪಾದಚಾರಿಗಳ ಸುರಂಗ ಮಾರ್ಗಗಳಿಗೆ ಬಿಡಲಾಗುತ್ತಿದೆ. ಪ್ರವಾಹ ಪೀಡಿತ ಸಮರ್‌ಸೆಟ್, ಡೆವಾನ್ ಮತ್ತು ಕಾರ್ನ್‌ವಾಲ್ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಪ್ರಧಾನಿ ಕ್ಯಾಮೆರಾನ್ ಪರಿಸ್ಥಿತಿ ಪರಿಶೀಲಿಸಿದರು.
ಪ್ರಕೃತಿ ವಿಕೋಪ ನಿರ್ವಹಣೆಗೆ ನೌಕಾದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನದಿಯ ದಡದಲ್ಲಿ ಪ್ರವಾಹ ತಡೆಗೆ ಮರಳು ತುಂಬಿದ ಚೀಲಗಳನ್ನು ಅಡ್ಡಲಾಗಿ ಇಡಲಾಗುತ್ತಿದೆ. ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.