ADVERTISEMENT

ಥ್ಯಾಚರ್ ಸಾವಿಗೆ `ಸಂಭ್ರಮ'- ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ನಿಧನವನ್ನು `ಸಂಭ್ರಮಿಸಲು' ಕೆಲವು ಸಂಘಟನೆಗಳು ಇಲ್ಲಿನ ಟ್ರಫಾಲ್ಗರ್ ಚೌಕದಲ್ಲಿ ಶನಿವಾರ `ಸಾಮೂಹಿಕ ಸಂತೋಷ ಕೂಟ'ಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ಒಂದೆಡೆ ಬುಧವಾರ ನಡೆಯಲಿರುವ ಥ್ಯಾಚರ್ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಥ್ಯಾಚರ್  ತಮ್ಮ ಆಡಳಿತಾವಧಿಯಲ್ಲಿ ಅನುಸರಿಸಿದ ನೀತಿಗಳನ್ನು ವಿರೋಧಿಸಿ ಮಾಜಿ ಕಾರ್ಮಿಕರು ಇದೇ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನು ಹತ್ತಿಕ್ಕಲು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ಥ್ಯಾಚರ್ ಅಧಿಕಾರಾವಧಿಯಲ್ಲಿ ಕಾರ್ಮಿಕ ವರ್ಗವನ್ನು ನಿರ್ಲಕ್ಷಿಸಿ ದಬ್ಬಾಳಿಕೆ ನಡೆಸಲಾಗಿತ್ತು ಎಂದು ಮಾಜಿ ಗಣಿ ಕಾರ್ಮಿಕರು, ಸಮಾಜವಾದ ಪರ ವಿದ್ಯಾರ್ಥಿಗಳು, ಬಂಡವಾಳಶಾಹಿ ವಿರೋಧಿಗಳು ಆಪಾದಿಸಿದ್ದಾರೆ.

ಈ ಮಧ್ಯೆ, ನಗರದಲ್ಲಿ ಶಾಂತ ವಾತಾವರಣ ಕಾಯ್ದುಕೊಳ್ಳಬೇಕು ಎಂದು ಲಂಡನ್ನಿನ ಮೇಯರ್ ಬೋರಿಸ್ ಜಾನ್‌ಸನ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

`ಪ್ರಜಾತಂತ್ರದಲ್ಲಿ ಜನರಿಗೆ ಪ್ರತಿಭಟಿಸುವ ಹಕ್ಕು ಇದೆ. ಆದರೆ, ದೇಶವನ್ನು ಮುನ್ನಡೆಸಿದ್ದ ಹಿರಿಯರೊಬ್ಬರು ಸಾವನ್ನಪ್ಪಿದ್ದಾಗ ಪ್ರತಿಭಟನೆ ಮಾಡುವುದು ತರವಲ್ಲ. ಪೊಲೀಸರಿಗೆ ಕಟ್ಟೆಚ್ಚರದಿಂದ ಇರಲು ಸೂಚಿಸಲಾಗಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು' ಎಂದು ಅವರು `ಎಲ್‌ಬಿಸಿ' ರೇಡಿಯೊದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.