ADVERTISEMENT

ದುಡಿಯುವ ಕುದುರೆ ಚಿನೂಕ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST
ದುಡಿಯುವ ಕುದುರೆ ಚಿನೂಕ್
ದುಡಿಯುವ ಕುದುರೆ ಚಿನೂಕ್   

ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನದ ವಾರ್ದಕ್ ಪ್ರಾಂತ್ಯದಲ್ಲಿ ಶನಿವಾರ ತಾಲಿಬಾನೀಯರು ನಡೆಸಿದ ರಾಕೆಟ್ ದಾಳಿಯಲ್ಲಿ ಪತನಗೊಂಡ ಚಿನೂಕ್ ಹೆಲಿಕಾಪ್ಟರ್ ಮಾದರಿ ಅಮೆರಿಕದ ಸೇನೆಯಲ್ಲಿ `ದುಡಿಯುವ ಕುದುರೆ~ ಎಂದೇ  ಗುರುತಿಸಿಕೊಂಡಿದೆ.

ಈ ದಾಳಿಯಿಂದ ತನ್ನ 31 ಯೋಧರನ್ನು ಕಳೆದುಕೊಂಡಿರುವ ಅಮೆರಿಕಕ್ಕೆ, ಬಹೂಪಯೋಗಿ ಚಿನೂಕ್‌ನ ನಾಶ ಸಹ ಆಘಾತ ಉಂಟು ಮಾಡಿದೆ.

ಯುದ್ಧ ಭೂಮಿಗೆ ಸೈನಿಕರು, ಫಿರಂಗಿ, ತೈಲ, ನೀರು, ಶಸ್ತ್ರಾಸ್ತ್ರದಂತಹ ಅಗತ್ಯ ವಸ್ತುಗಳನ್ನು ಚಿನೂಕ್ ಪೂರೈಸುತ್ತದೆ. 2001ರಿಂದ ಆಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿರುವ ಈ ಬಗೆಯ ಹೆಲಿಕಾಪ್ಟರ್‌ಗಳು ವೈದ್ಯಕೀಯ ಸೇವೆ, ವಿಕೋಪ ಪರಿಹಾರ ಕಾರ್ಯಾಚರಣೆ, ಬೆಂಕಿ ಅನಾಹುತ ತಡೆಗಟ್ಟುವುದು, ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣ ಮತ್ತು ಸೈನಿಕರು ಪ್ಯಾರಾಚೂಟ್‌ನಿಂದ ಕೆಳಗಿಳಿಯುವ ಕೆಲಸಕ್ಕೆ ಬಳಕೆಯಾಗುತ್ತಿವೆ.

1962ರಲ್ಲಿ ಮೊದಲು ಬಳಕೆಗೆ ಬಂದಾಗಿನಿಂದ ಈವರೆಗೆ 1,179 ಚಿನೂಕ್ ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗಿದೆ. ರಾಕೆಟ್ ದಾಳಿಗೆ ಬಲಿಯಾದ ಯೋಧರಲ್ಲಿ 22 ಮಂದಿ ನೌಕಾಪಡೆಯ ಮಹತ್ವದ `ಸೀಲ್~ ಕಮಾಂಡೊಗಳು. ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇದೇ ಘಟಕ ಪಾಲ್ಗೊಂಡಿತ್ತು.  ಆದರೆ ಮೃತರು ಬೇರೆ ವ್ಯಕ್ತಿಗಳು ಎಂದು ಮೂಲಗಳು ತಿಳಿಸಿವೆ. ಅಂತರ ರಾಷ್ಟ್ರೀಯ ಭದ್ರತಾ ನೆರವು ಪಡೆಗೆ ಸೇರಿದ ಒಟ್ಟು 1.50 ಲಕ್ಷ ಯೋಧರು ಆಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದು, ಇವರಲ್ಲಿ 1 ಲಕ್ಷ ಮಂದಿ ಅಮೆರಿಕದವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.