ನ್ಯೂಯಾರ್ಕ್ (ಪಿಟಿಐ): ನಟ ಶಾರೂಕ್ ಖಾನ್ ಅವರನ್ನು ಅಮೆರಿಕದ ನ್ಯೂಯಾರ್ಕ್ ವಿಮಾನನಿಲ್ದಾಣದಲ್ಲಿ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ `ಯಾಂತ್ರಿಕ ಕ್ಷಮಾಯಾಚನೆ~ಯನ್ನು ಒಪ್ಪಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಅಮೆರಿಕದ ಉನ್ನತ ಮಟ್ಟಕ್ಕೆ ಒಯ್ಯುವುದಾಗಿ ತಿಳಿಸಿದೆ.
ಇಲ್ಲಿನ ಯಾಲೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲೆಂದು ಶಾರೂಕ್ ಖಾನ್ ಇಲ್ಲಿಗೆ ಬಂದಿದ್ದರು. ಆದರೆ ಅವರನ್ನು ನಿಲ್ದಾಣದ ವಲಸೆ ಅಧಿಕಾರಿಗಳು ತಡೆದು ಸುಮಾರು 2 ಗಂಟೆಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದರು. ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಮಧ್ಯಪ್ರವೇಶದ ನಂತರವಷ್ಟೇ ಶಾರೂಕ್ ಅವರನ್ನು ಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿರುವ ನಿರುಪಮಾ ರಾವ್ ಅವರನ್ನು ಸಂಪರ್ಕಿಸಿ ಈ ವಿಷಯವನ್ನು ಅಮೆರಿಕದ ಉನ್ನತ ಮಟ್ಟದ ಗಮನಕ್ಕೆ ತರಬೇಕೆಂದು ಹೇಳಿದ್ದಾರೆ.
ಈ ಪ್ರಕರಣದಿಂದಾಗಿ ಶಾರೂಕ್ ಅವರು ತೀವ್ರವಾಗಿ ವಿಚಲಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಂತರ ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ~ನನಗೆ ಅಹಂಕಾರ ಜಾಸ್ತಿಯಾಯ್ತು ಅನಿಸಿದಾಗ ಅಮೆರಿಕಕ್ಕೆ ಬರುತ್ತೇನೆ. ಇಲ್ಲಿನ ವಲಸೆ ಅಧಿಕಾರಿಗಳು ನನ್ನ ಸ್ಟಾರ್ ಗಿರಿಯನ್ನು ಒದೆಯುತ್ತಾರೆ~ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.