ADVERTISEMENT

ಪಕ್ಷಿಯಂತೆ ಹಾರುವ ರೋಬೊಟ್!

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST
ಪಕ್ಷಿಯಂತೆ ಹಾರುವ ರೋಬೊಟ್!
ಪಕ್ಷಿಯಂತೆ ಹಾರುವ ರೋಬೊಟ್!   

ವಾಷಿಂಗ್ಟನ್ (ಪಿಟಿಐ): ಥೇಟ್ ಪಕ್ಷಿಯಂತೆ ಹೋಲುವ ರೋಬೊಟ್  ಅನ್ನು ಅಮೆರಿಕ ಸೇನೆ ಅಭಿವೃದ್ಧಿಪಡಿಸಿದೆ.`ರೋಬೊ ರೇವನ್' ಹೆಸರಿನ ಈ ವಿನೂತನ ರೋಬೊಟ್  ಹಕ್ಕಿಯಂತೆ ಮುಗಿಲೆತ್ತರಕ್ಕೆ ಹಾರಬಲ್ಲದು. ವೈರಿಗಳಿಗೆ ಯಾವುದೇ ಸುಳಿವು ನೀಡದೇ ಕ್ಷಣಾರ್ಧದಲ್ಲಿ ಅವರ ಅಡುಗುತಾಣಗಳನ್ನು ನಿರ್ನಾಮ ಮಾಡಬಲ್ಲದು.

ಭವಿಷ್ಯದಲ್ಲಿ  ಯುದ್ಧ ಭೂಮಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಮರ್ಥ್ಯ ಈ ರೋಬೊಟ್‌ಗಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.ಈ ರೋಬೊಟ್ ಅನ್ನು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡದ ಸಹಭಾಗಿತ್ವದಲ್ಲಿ ಅಮೆರಿಕ ಸೇನೆ ಅಭಿವೃದ್ಧಿಪಡಿಸಿದೆ. ಈ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿ ಡಾ. ಎಸ್.ಕೆ. ಗುಪ್ತಾ ಇರುವುದು ಸಹ ವಿಶೇಷ.

ಎರಡು ರೆಕ್ಕೆಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸುವ ವ್ಯವಸ್ಥೆ ಹೊಂದಿರುವ ಇದು, ಎಂತಹ ವಿಷಮ ಪರಿಸ್ಥಿತಿಯಲ್ಲಿಯು ಹಾರಾಡಬಲ್ಲದು ಎಂದು ಅಮೆರಿಕ ಸೇನಾ ಸಂಶೋಧನಾ ಪ್ರಯೋಗಾಲಯದ (ಎಆರ್‌ಎಲ್) ವಿಜ್ಞಾನಿಗಳು ತಿಳಿಸಿದ್ದಾರೆ.

`ಹಗುರ ತೂಕದ ಈ ರೋಬೊಟ್, ಬರಿಗಣ್ಣಿಗೆ ಗೋಚರಿಸದೇ ಮರೆಯಾಗಬಹುದು. ಇಂತಹ ವಿಶಿಷ್ಟ ಲಕ್ಷಣ ಹೊಂದಿರುವ ಇದು, ಪರೀಕ್ಷೆ ಸಂದರ್ಭದಲ್ಲಿ ಪಕ್ಷಿಗಳ ಗಮನ ತನ್ನತ್ತ ಸೆಳೆದಿತ್ತು' ಎಂದು ಮೇರಿಲ್ಯಾಂಡ್ ವಿವಿ ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದ ಜಾನ್ ಗೆರ್ಡೆ ಹೇಳಿದ್ದಾರೆ.

ಹೆಲಿಕಾಪ್ಟರ್ ಅಥವಾ ಇತರ ಸಾಧನಗಳಿಗೆ ಹೋಲಿಸಿದರೆ ಇದರ ಶಬ್ದ ಬಹಳ ಕಡಿಮೆ. ಆದ್ದರಿಂದ ಇದರ ಇರುವಿಕೆಯ ಸುಳಿವು ಕೂಡ ಸಿಗದು. ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾಗಿರುವ `ರೋಬೊ ರೇವನ್' 2 ಅಡಿಗಿಂತ ಕಡಿಮೆ ಗಾತ್ರ ಹೊಂದಿದ್ದು, ತೂಕ ಕೂಡ ಬಹಳ ಕಡಿಮೆ ಎಂದು ತಿಳಿಸಿದ್ದಾರೆ.

`ಗಂಟೆಗೆ 10 ಮೈಲಿ ವೇಗವಾಗಿ ಬೀಸುವ ಗಾಳಿಯಲ್ಲಿ ಹಾರಾಡಬಲ್ಲ ಈ ರೋಬೊಟ್‌ನಲ್ಲಿ ಚಿಕ್ಕ ಗಾತ್ರದ ವಿಡಿಯೊ ಕ್ಯಾಮೆರಾವನ್ನು ಅಳವಡಿಸಬಹುದು. ಇದರಿಂದ ಶತ್ರು ನೆಲೆ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಸೂಕ್ಷ್ಮ ಸಂವೇದಿಗಳ ಸಹಾಯದಿಂದ ರೋಬೊಟ್ ಹಾರಾಡುವಂತೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನಾ ಕಾರ್ಯಗಳು ಮುಂದುವರೆದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2008ರಲ್ಲಿ ಜಾನ್ ಗೆರ್ಡೆ ಅವರು ಪದವಿ ಹಂತದಲ್ಲಿದ್ದಾಗಲೇ `ರೋಬೊ ರೇವನ್' ಅಭಿವೃದ್ಧಿಪಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಇನ್ನೊಬ್ಬ ವಿಜ್ಞಾನಿ ಡಾ. ಎಸ್.ಕೆ. ಗುಪ್ತಾ ಅವರು, ರೋಬೊಟ್‌ನ ರೆಕ್ಕೆ ಅಭಿವೃದ್ಧಿಪಡಿಸುವುದರಲ್ಲೇ 10 ವರ್ಷ ಕಳೆದಿದ್ದಾರೆ.

ಪಕ್ಷಿಯಂತೆ ರೆಕ್ಕೆಗಳನ್ನು ಹೊಂದಿರುವ ರೋಬೊಟ್ ಅನ್ನು ಗುಪ್ತಾ ಮತ್ತು ಅವರ ಯುವ ವಿಜ್ಞಾನಿಗಳ ತಂಡವು, 2007ರಲ್ಲಿ ಸಿದ್ಧಪಡಿಸಿತ್ತು. ಒಂದೇ ಮೋಟಾರ್‌ನಿಂದ ಹಾರಾಡುವ ಸಾಮರ್ಥ್ಯ ಹೊಂದಿದ್ದ ಆ ರೋಬೊಟ್‌ನ ಎರಡು ರೆಕ್ಕೆಗಳು ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದವು. 2010ರಲ್ಲಿ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಬಳಿಕ ಇಂತಹುದೇ ಮಾದರಿಯ ನಾಲ್ಕು ರೋಬೊಟ್‌ಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT