ADVERTISEMENT

ಪಿಪಿಪಿ - ಎಪಿಎಂಎಲ್ ಗೌಪ್ಯ ಮಾತುಕತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಇಸ್ಲಾಮಾಬಾದ್, (ಪಿಟಿಐ): ಪಾಕಿಸ್ತಾನದಲ್ಲಿ ಆಡಳಿತದಲ್ಲಿರುವ ಪಿಪಿಪಿ, ತನ್ನ ಎದುರಾಳಿ ಪಿಎಂಎಲ್-ಎನ್ ಪಕ್ಷವನ್ನು ನಿರ್ಲಕ್ಷಿಸುವ ಉದ್ದೇಶದಿಂದ, ಪರ್ವೆಜ್ ಮುಷರಫ್ ಅವರ ಜತೆ ಗೌಪ್ಯವಾಗಿ ಸಂಧಾನ ನಡೆಸುತ್ತಿದ್ದು, ಮಾಜಿ ಸೇನಾ ಆಡಳಿತಗಾರ ಲಂಡನ್‌ನಿಂದ ಸ್ವದೇಶಕ್ಕೆ ಮರಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

ಪಿಎಂಎಲ್-ಎನ್ ಪಕ್ಷವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಮುಷರಫ್ ಅವರ ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ (ಎಪಿಎಂಎಲ್) ಮತ್ತು ಪಿಪಿಪಿ ಗೌಪ್ಯ ಮಾರ್ಗದ ಮೂಲಕ ಸಂಧಾನ ಮಾತುಕತೆ ನಡೆಸಿವೆ ಎಂದು `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.

ಮುಷರಫ್ ಅವರ ಹಿರಿಯ ಸಲಹೆಗಾರ ಚೌದರಿ ಸರ್ಫರಾಜ್ ಅಂಜುಮ್ ಕಲ್ಹೋನ್ ಅವರನ್ನು ಬ್ರಿಟನ್‌ನ ಕೇಂಬ್ರಿಜ್ ನಿವಾಸದಲ್ಲಿ ಆ. 7ರಂದು ಪಿಪಿಪಿ ನಿಯೋಗವೊಂದು ಭೇಟಿ ಮಾಡಿ 2 ಗಂಟೆಗಳ ಕಾಲ ಚರ್ಚಿಸಿದೆ.

ಈ ಎರಡೂ ಪಕ್ಷಗಳಲ್ಲಿ ಮೈತ್ರಿ ಏರ್ಪಟ್ಟರೆ ದೇಶ ಭ್ರಷ್ಟರಾಗಿರುವ ಮುಷರಫ್ ಪುನಃ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಎಪಿಎಂಎಲ್ ಮತ್ತು ಪಿಪಿಪಿ ಪಕ್ಷಗಳು ಪರಸ್ಪರ ಟೀಕೆ ಮಾಡದಂತೆ ಒಪ್ಪಿಕೊಂಡಿದ್ದು, ಎರಡೂ ಪಕ್ಷಗಳು ತಮ್ಮ ವೈರಿ ಪಿಎಂಎಲ್-ಎನ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಲು ನಿರ್ಧರಿಸಿವೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿರುವ ಪಿಎಂಎಲ್-ಎನ್ ಅನ್ನು ಸೋಲಿಸಲು ಅಗತ್ಯ ಕಾರ್ಯತಂತ್ರ ರೂಪಿಸಲು ಎಪಿಎಂಎಲ್ ಮತ್ತು ಪಿಪಿಪಿ ಮುಖಂಡರು ನಿರ್ಧರಿಸಿದ್ದು, ಗೌಪ್ಯ ಮಾತುಕತೆಯನ್ನು ಮುಂದುವರಿಸಲು ಒಪ್ಪಿಕೊಂಡಿವೆ ಎನ್ನಲಾಗಿದೆ.

2009ರಿಂದ ದೇಶದ ಹೊರಗಿರುವ ಮುಷರಫ್ ಅವರು ಪಾಕಿಸ್ತಾನಕ್ಕೆ ಮರಳಿ 2013ರ ಚುನಾವಣೆಯಲ್ಲಿ ತಮ್ಮ ಪಕ್ಷದ ಸಾರಥ್ಯ ವಹಿಸಿಕೊಳ್ಳುವುದಾಗಿ ಕಳೆದ ಮಾರ್ಚ್‌ನಲ್ಲಿ ತಿಳಿಸಿದ್ದರು. ಮುಷರಫ್  ದೇಶಕ್ಕೆ ಮರಳುವುದರಿಂದ  ವಿರೋಧಿ ಪಿಎಂಎಲ್-ಎನ್ ಅನ್ನು ಸುಲಭವಾಗಿ ಹಣಿಯಬಹುದು ಎಂಬುದು ಪಿಪಿಪಿ ಅಧ್ಯಕ್ಷ  ಜರ್ದಾರಿ   ಲೆಕ್ಕಾಚಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.