ADVERTISEMENT

ಪ್ರತ್ಯೇಕ ಬಾಂಬ್ ಸ್ಫೋಟ: 68 ಸಾವು

ಏಜೆನ್ಸೀಸ್
Published 24 ಫೆಬ್ರುವರಿ 2018, 19:51 IST
Last Updated 24 ಫೆಬ್ರುವರಿ 2018, 19:51 IST
ಪ್ರತ್ಯೇಕ ಬಾಂಬ್ ಸ್ಫೋಟ: 68 ಸಾವು
ಪ್ರತ್ಯೇಕ ಬಾಂಬ್ ಸ್ಫೋಟ: 68 ಸಾವು   

ಮೊಗದಿಶು: ಸೊಮಾಲಿಯ ರಾಜಧಾನಿ ಮೊಗದಿಶು ನಗರದಲ್ಲಿ ಶನಿವಾರ ನಡೆದ ಎರಡು ಕಾರ್ ಬಾಂಬ್ ಸ್ಫೋಟದಲ್ಲಿ 45 ಜನ ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ.

‘ಅಧ್ಯಕ್ಷರ ಅರಮನೆ ಮತ್ತು ಹತ್ತಿರದಲ್ಲಿ ಇದ್ದ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ’ ಎಂದು ಆಂಬ್ಯುಲೆನ್ಸ್‌ ಸೇವೆಯ ಮುಖ್ಯಾಧಿಕಾರಿ ‌ಅಬ್ದುಕಾದಿರ್ ಅಬ್ದುರಾಹ್ಮಾನ್ ಅಡೆನ್ ತಿಳಿಸಿದ್ದಾರೆ.

‘ಅಧ್ಯಕ್ಷರ ಮನೆಯ ಪ್ರವೇಶದ್ವಾರದ ಬಳಿ ಇದ್ದ ಭದ್ರತಾ ಸಿಬ್ಬಂದಿ ಮೇಲೆ ಮೊದಲು ದಾಳಿ ನಡೆಸಲಾಗಿ‌‌ದೆ. ನಂತರ ಸರ್ಕಾರಿ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ‌‌’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಹೋಟೆಲ್‌ನಲ್ಲಿ ನಡೆದ ದಾಳಿಯಲ್ಲಿ 21 ಜನರು ಮೃತಪಟ್ಟಿದ್ದು, ಅಧ್ಯಕ್ಷರ ಅರಮನೆ ಭದ್ರತೆಗಾಗಿ ನಿಯೋಜಿಸಿದ್ದ 15 ಜನ ಯೋಧರೂ ಮೃತಪಟ್ಟಿದ್ದಾರೆ. ಹೆಚ್ಚಿನ ಜನ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಮೇಜರ್ ಮೊಹಮದ್ ಅಬ್ದುಲ್ಲಾಹಿ  ತಿಳಿಸಿದ್ದಾರೆ.

ಮೊಗದಿಶು ನಗರದಲ್ಲಿ ಅಕ್ಟೋಬರ್‌ನಲ್ಲಿ ನಡೆದ ಅವಳಿ ದಾಳಿಯಲ್ಲಿ 500 ಜನ ಮೃತಪಟ್ಟಿದ್ದರು.

ಆತ್ಮಹತ್ಯಾ ದಾಳಿ: 23 ಸಾವು

ಕಾಬೂಲ್‌ (ಎಎಫ್‌ಪಿ): ಆಫ್ಗಾನಿಸ್ತಾನದಲ್ಲಿ ಶ‌ನಿವಾರ ನಡೆದ ಎರಡು ಪ್ರತ್ಯೇಕ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಫರಾಹ್‌ ಜಿಲ್ಲೆಯ ಬಾಲಾ ಬುಲುಕ್‌ ಜಿಲ್ಲೆಯ ಸೇನಾ ಶಿಬಿರದ ಮೇಲೆ ತಾಲಿಬಾನ್‌ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ದೌಲತ್‌ ವಜಿರ್‌ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಆತ್ಮಹತ್ಯಾ ಬಾಂಬರ್‌ ಜನನಿಬಿಡ ಸ್ಥಳದಲ್ಲಿ ತನ್ನನ್ನು ಸ್ಫೋಟಿಸಿಕೊಂಡ್ಡಿದ್ದರಿಂದ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ತ್ರತ್‌ ರಹಿಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.