ADVERTISEMENT

ಬಡತನ ಮುಕ್ತ ವಿಶ್ವ: ಕಿಮ್ ಕನಸು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಕೊರಿಯಾ ಮೂಲದ, ಅಮೆರಿಕ ಪೌರತ್ವ ಪಡೆದುಕೊಂಡಿರುವ ವೈದ್ಯ ಜಿಮ್ ಯೊಂಗ್ ಕಿಮ್ ಅವರು ವಿಶ್ವ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಜುಲೈ 1ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ.

`ಕ್ಷಿಪ್ರ ಗತಿಯಲ್ಲಿ ಆಗುತ್ತಿರುವ ಜಾಗತಿಕ ಬದಲಾವಣೆಗೆ ಅನುಗುಣವಾಗಿ ವಿಶ್ವ ಬ್ಯಾಂಕ್‌ನ ಸಮೂಹದಲ್ಲಿ ಮರು ಹೊಂದಾಣಿಕೆ ಅಪೇಕ್ಷಣೀಯ~ ಎಂದು ಕಿಮ್ ಹೇಳಿದ್ದಾರೆ.

`ಹಳೆಯ ಮತ್ತು ಹೊಸ ಮಿತ್ರರೊಂದಿಗೆ ಸ್ನೇಹ- ಸೌಹಾರ್ದದಿಂದ ಕಲೆತು ಸಂಸ್ಥೆಯನ್ನು ಸದೃಢಗೊಳಿಸಬೇಕಿದೆ. ದಾನಿಗಳು ಮತ್ತು ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಹೆಚ್ಚಿನ ಕಾರ್ಯಕ್ಷಮತೆಯಿಂದ ಸೇವೆ ಒದಗಿಸುವ  ಮೂಲಕ ಸುಸ್ಥಿರ ಪ್ರಗತಿ ಸಾಧಿಸಬೇಕಿದೆ. ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ವರ್ಧಿಸುವ ಅಗತ್ಯವೂ ಇದೆ. ಬಡತನ ಮುಕ್ತ ವಿಶ್ವವೇ ನಮ್ಮ ಕನಸು~ ಎಂದಿದ್ದಾರೆ.

ಜಿಮ್ ಯೊಂಗ್ ಕಿಮ್ (52) ಅವರೊಂದಿಗೆ  ನೈಜೀರಿಯಾದ ಹಣಕಾಸು ಸಚಿವ ಗೋಜಿ ಒಕೊಂಜೊ-ಐವಿಯಾಲ್ ಮತ್ತು ಕೊಲಂಬಿಯಾದ ಮಾಜಿ ಸಚಿವ ಜೋಸ್ ಆಂಟೊನಿಯೊ ಒಕಾಂಪೊ ಅವರು ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಅಮೆರಿಕ ಬೆಂಬಲಿತ ಅಭ್ಯರ್ಥಿಯಾದ ಕಿಮ್ ಚುನಾಯಿತರಾದರು.

ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಜನಿಸಿದ ಕಿಮ್, ಸದ್ಯಕ್ಕೆ ಡಾರ್ಟ್‌ಮೌತ್ ಕಾಲೇಜಿನ ಅಧ್ಯಕ್ಷರಾಗಿದ್ದಾರೆ.  `ಪಾರ್ಟನರ್ಸ್‌ ಇನ್ ಹೆಲ್ತ್~ (ಪಿಐಎಚ್) ಸಂಸ್ಥೆ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅವರು, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಎಚ್‌ಐವಿ/ಏಡ್ಸ್ ವಿಭಾಗದ ಮಾಜಿ ನಿರ್ದೇಶಕರು.

ವಿಶ್ವ ಬ್ಯಾಂಕ್‌ನ ಹಾಲಿ ಅಧ್ಯಕ್ಷ ರಾಬರ್ಟ್ ಬಿ ಜಿಯೊಲಿಕ್ ಅವರ ಐದು ವರ್ಷಗಳ ಅವಧಿ ಜೂನ್ ಅಂತ್ಯಕ್ಕೆ ಮುಗಿಯಲಿದೆ.

`ಮಾರುಕಟ್ಟೆ ಆಧಾರಿತ ಪ್ರಗತಿಗೆ ಆದ್ಯತೆ~
ಲಂಡನ್ (ಐಎಎನ್‌ಎಸ್): ಮಾರುಕಟ್ಟೆ ಆಧಾರಿತ ಪ್ರಗತಿಯೇ ಎಲ್ಲಾ ರಾಷ್ಟ್ರಗಳ ಮೊದಲ ಆದ್ಯತೆ ಆಗಬೇಕು. ಇದು ಉದ್ಯೋಗ ಸೃಷ್ಟಿ ಮತ್ತು ದೇಶವನ್ನು ಬಡತನದಿಂದ ಹೊರತರುವ ಮಾರ್ಗ ಎಂದು ವಿಶ್ವ ಬ್ಯಾಂಕ್ ನಿಯೋಜಿತ ಅಧ್ಯಕ್ಷ ಜಿಮ್ ಯೊಂಗ್ ಕಿಮ್ ಹೇಳಿದ್ದಾರೆ.

`ಬಿಬಿಸಿ~ ವಾಹಿನಿಯೊಂದಿಗೆ ಮಾತನಾಡಿರುವ ಅವರು, `ಒಂದೇ ದೃಷ್ಟಿಕೋನ ಇಲ್ಲವೆ ನಿರ್ದಿಷ್ಟ ರಾಜಕೀಯ ನೋಟವನ್ನು ಇಟ್ಟುಕೊಂಡು ಕೆಲಸ ಮಾಡುವುದಿಲ್ಲ. ವಿಶ್ವ ಬ್ಯಾಂಕ್‌ನ ಯೋಜನೆಗಳು ಫಲಪ್ರದವಾಗಬೇಕಿದ್ದರೆ ವಿವಿಧೆಡೆಯ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT