ADVERTISEMENT

ಬರ್ಲಿನ್‌ ಗೋಡೆ ನೆಲಸಮಕ್ಕೆ 25ರ ಸಂಭ್ರಮ

ಗಿರಿಜಾ ಎಂ.ಆರ್‌.
Published 8 ನವೆಂಬರ್ 2014, 19:30 IST
Last Updated 8 ನವೆಂಬರ್ 2014, 19:30 IST

ಬರ್ಲಿನ್‌: ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸಲು 1961ರಲ್ಲಿ ರಾಜಧಾನಿ ಬರ್ಲಿನ್‌ ನಗರದಲ್ಲಿ ಗೋಡೆ ಕಟ್ಟಲಾಗಿತ್ತು.  ಅದನ್ನು ಜನ 1989ರ  ನವೆಂಬರ್‌ 9ರಂದು ಸಾಂಕೇತಿಕವಾಗಿ ಒಡೆದಿದ್ದರು. ಮುಂದೆ ಜರ್ಮನಿಯ ಏಕೀಕರಣದ ನಂತರ ಗೋಡೆಯನ್ನು ಪೂರ್ತಿ ನೆಲಸಮ ಮಾಡಲಾಯಿತು.

ಅದು ಈಗಲೂ ಬರ್ಲಿನ್‌ ಜನರ ಪಾಲಿಗೆ ಭಾವನಾತ್ಮಕವಾಗಿ ಸ್ಮರಣೀಯ  ದಿನ.   ಕಚೇರಿ ಕೆಲಸದ ಮೇಲೆ ಜರ್ಮನಿಗೆ ಹೋಗಿದ್ದ ನಾನು ಮೊನ್ನೆ ಅಲ್ಲಿ ಬರ್ಲಿನ್‌ ಜನರನ್ನು ಮಾತನಾಡಿಸಿದೆ. ಅಲ್ಲಿ ಅನೇಕರು ಆ ಸ್ಥಳವನ್ನು ಅತ್ಯುತ್ಸಾಹದಿಂದ ತೋರಿಸಿದರು. 

ಈ ಏಕೀಕರಣದ ಈ ಸಂಭ್ರಮದ 25ನೇ ವರ್ಷದ ಆಚರಣೆಗೆ ಬರ್ಲಿನ್‌ನಲ್ಲಿ ಈಗ ಭಾರಿ ತಯಾರಿ ನಡೆದಿದೆ. ನಗರದ ವಿವಿಧ ಕಡೆಗಳಲ್ಲಿ ವೇದಿಕೆಗಳನ್ನು ಸಿದ್ಧಪಡಿಸಿದ್ದಾರೆ. ಆಚರಣೆಗೆಂದು ಚೌಕಾಕಾರದ ನೀಲಿ ಬಣ್ಣದ ಬಾಕ್ಸ್‌ಗಳನ್ನು ಇಟ್ಟಿದ್ದಾರೆ. ಬರ್ಲಿನ್‌ ಗೋಡೆಯಿದ್ದ ಭಾಗದಲ್ಲಿ ಬಲೂನುಗಳನ್ನು ಹಾರಿಸಲಾಗುತ್ತದೆ, ‘ನಾವು ಒಂದು’ ಎಂಬ ಸಂದೇಶ ಸಾರಲಾಗುತ್ತದೆ. ಗೋಡೆ ಇದ್ದ ಆಸುಪಾಸಿನಲ್ಲಿ ಹೊಳೆಯುವ  ಬಲೂನುಗಳನ್ನು  ಆಲಂಕಾರವಾಗಿ ತೂಗಿಬಿಡಲಾಗಿದೆ.

ಕರ್ನಾಟಕದಿಂದ ಹೋದ ನಮಗೆ ಇದು ಬರೀ ಒಂದು ಗೋಡೆ ಬಿದ್ದ ಕತೆಯಾಗಿ ಕಾಣಿಸಬಹುದು, ಆದರೆ ಜರ್ಮನಿಯರ ಪಾಲಿಗೆ ಅದು, 25 ವರ್ಷಗಳ ಹಿಂದಿನವರೆಗೆ ಗೋಡೆ ಆಚೆ ಇರುವ  ತಮ್ಮದೇ ನಾಡಿನ ಬಾಂಧವರನ್ನು, ರಕ್ತ ಸಂಬಂಧಿಕರನ್ನು ಭೇಟಿ ಮಾಡಲಾಗದೆ ಇದ್ದ ನೋವು ಶಮನವಾದ ದಿನ. ಹೃದಯದ ಆಳದಲ್ಲಿ ತಾವು ಬೇರೆ ಎಂದು ಬಲವಂತವಾಗಿ ಹೇರಿದ್ದ ಕಟ್ಟುಪಾಡುಗಳು ನೆಲಸಮವಾದ ದಿನ.

ದೇಶ, ಭಾಷೆ ಕುರಿತು ಬಹಳ ಅಭಿಮಾನವಿರುವ ಜರ್ಮನರ ಭಾವನೆ­ಗಳನ್ನು ಹತ್ತಿರದಿಂದ ನೋಡಲು ಸಿಕ್ಕಿದ್ದು ನನ್ನ ಪಾಲಿಗೆ ಒಂದು ಅವಿಸ್ಮರಣೀಯ ಘಟನೆ .
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.