ADVERTISEMENT

ಭಯೋತ್ಪಾದನೆ ನಿಗ್ರಹ ಚರ್ಚೆ ಸಾಧ್ಯತೆ

ಅಲಿಪ್ತ ರಾಷ್ಟ್ರಗಳ ಶೃಂಗಸಭೆಯಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2016, 19:30 IST
Last Updated 17 ಸೆಪ್ಟೆಂಬರ್ 2016, 19:30 IST
ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಮಾರ್ಗರಿಟಾದಲ್ಲಿ ಶನಿವಾರ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸ್ವಾಗತಿಸಿದರು  – ರಾಯಿಟರ್ಸ್ ಚಿತ್ರ
ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಮಾರ್ಗರಿಟಾದಲ್ಲಿ ಶನಿವಾರ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸ್ವಾಗತಿಸಿದರು – ರಾಯಿಟರ್ಸ್ ಚಿತ್ರ   

ಮಾರ್ಗರಿಟಾ ದ್ವೀಪ (ವೆನಿಜುವೆಲಾ) (ಪಿಟಿಐ): ಅಲಿಪ್ತ ರಾಷ್ಟ್ರಗಳ 17ನೇ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಶನಿವಾರ ವೆನಿಜುವೆಲಾದ ಮಾರ್ಗರಿಟಾ  ದ್ವೀಪಕ್ಕೆ ಬಂದಿಳಿದರು.

ವಿಶ್ವಸಂಸ್ಥೆ ಸುಧಾರಣೆ, ಹವಾಮಾನ ವೈಪರೀತ್ಯ ಮತ್ತು ಅಣ್ವಸ್ತ್ರಗಳ ನಿಶಸ್ತ್ರೀಕರಣ ವಿಚಾರಗಳನ್ನು ಅವರು ಶೃಂಗಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಇಲ್ಲಿನ ಸ್ಯಾಂಟಿಯಾಗೊ ಮರಿನೊದಲ್ಲಿರುವ ಕೆರಿಬಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಮೀದ್ ಅನ್ಸಾರಿ ಮತ್ತು ಭಾರತದ ನಿಯೋಗವನ್ನು  ವೆನಿಜುವೆಲಾದ ಉಪಾಧ್ಯಕ್ಷ ಅರಿಸ್ಟೊಬುಲಿ ಇಸ್ತುರಿಜ್ ಬರಮಾಡಿಕೊಂಡರು.

ವಿಮಾನ ಪ್ರಯಾಣದ ಮಧ್ಯೆ ಪತ್ರಕರ್ತರ ಜತೆ ಮಾತನಾಡಿದ ಅನ್ಸಾರಿ ಅವರು, ‘ಭಯೋತ್ಪಾದನೆ ಅಭಿವೃದ್ಧಿ ಮತ್ತು ಶಾಂತಿ ಎರಡಕ್ಕೂ ಮಾರಕ   ಅದು ತಂದೊಡ್ಡುತ್ತಿರುವ ಅಪಾಯಗಳ ಬಗ್ಗೆ ಭಾರತ ಎಲ್ಲಾ  ವೇದಿಕೆಗಳಲ್ಲೂ ಧ್ವನಿ ಎತ್ತಿದೆ. ಅಲಿಪ್ತ ರಾಷ್ಟ್ರಗಳ ಶೃಂಗಸಭೆಯಲ್ಲೂ ನಾವು ಅದನ್ನು ಪ್ರಸ್ತಾಪಿಸುತ್ತೇವೆ.  ಅದರಲ್ಲಿ ಯಾವುದೇ ಸಂದೇಹವೇ ಬೇಡ’ ಎಂದು ಅವರು ಹೇಳಿದ್ದಾರೆ.

ಅಲಿಪ್ತ ರಾಷ್ಟ್ರಗಳು
* 60ರ ದಶಕದ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಬಣಗಳಿಗೆ ಸೇರದೆ ಉಳಿದ ರಾಷ್ಟ್ರಗಳು
* 120 ಸದಸ್ಯ ರಾಷ್ಟ್ರಗಳು
* 1961ರಲ್ಲಿ 25 ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಆರಂಭ
* ಭಾರತವೂ ಈ ಒಕ್ಕೂಟದ ಸಂಸ್ಥಾಪಕ ರಾಷ್ಟ್ರಗಳಲ್ಲಿ ಒಂದು
* ವಿಶ್ವಸಂಸ್ಥೆಯ ನಂತರ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.