ಟೋಕಿಯೊ (ಪಿಟಿಐ): ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ನೆಲೆಯಾಗಿದೆ ಎನ್ನುವ ಸೂಚನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, `ಗಡಿಯಾಚೆಗಿನ ಭಯೋತ್ಪಾದನೆಯಿಂದ ಆಫ್ಘಾನಿಸ್ತಾನಕ್ಕೆ ಆತಂಕ ಎದುರಾಗಿದ್ದು, ಈ ಪಿಡುಗಿನಿಂದ ಹೊರಬರಲು ಆ ದೇಶಕ್ಕೆ ವಿಶ್ವ ಸಮುದಾಯ ನೆರವು ನೀಡಬೇಕಿದೆ~ ಎಂದಿದ್ದಾರೆ.
`ಸ್ವಾವಲಂಬನೆಯನ್ನು ಸಾಧಿಸುವ ಆಫ್ಘಾನಿಸ್ತಾನದ ಬಹು ದಿನಗಳ ಕನಸು ನನಸಾಗಲು ನಾವು ನೆರವು ನೀಡುತ್ತಿದ್ದೇವೆ. ಇದರಲ್ಲಿ ಯಶ ಕಂಡರೂ ಅಲ್ಲಿ ಭಯೋತ್ಪಾದನೆ ಬೇರೆ ಬೇರೆ ಸ್ವರೂಪದಲ್ಲಿ ಬೇರು ಬಿಟ್ಟಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು~ ಎಂದು ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಇಲ್ಲಿ ನಡೆಯುತ್ತಿರುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
`ಸದೃಢ ದೇಶ ಕಟ್ಟಲು ಒಳ್ಳೆಯ ಆಡಳಿತ ಬಹು ಮುಖ್ಯವಾಗುತ್ತದೆ ಎನ್ನುವುದು ಭಾರತದ ಭಾವನೆ. ಉತ್ತಮ ಆಡಳಿತಕ್ಕೆ ಒಂದು ದೇಶವು ತನ್ನ ಭೂಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಆಫ್ಘನ್ ವಿಷಯದಲ್ಲಿ ಇದು ಇನ್ನೂ ಈಡೇರಿಲ್ಲ~ ಎಂದು ಅವರು ವಿಶ್ಲೇಷಿಸಿದರು.
ಈ ಸಮಾವೇಶದಲ್ಲಿ ಸುಮಾರು 70 ದೇಶಗಳು ಹಾಗೂ ಅಂತರರಾಷ್ಟ್ರೀಯ ಮಂಡಳಿಗಳು ಭಾಗವಹಿಸಿವೆ. ಆಫ್ಘಾನಿಸ್ತಾನವು ಸುಸ್ಥಿರ ಅಭಿವೃದ್ಧಿಯ ಕಡೆ ಸಾಗುವಂತೆ ಮಾಡುವುದು ಹಾಗೂ 2014ರ ವರೆಗೆ ಆಫ್ಘನ್ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ನಡುವಿನ ಸಹಭಾಗಿತ್ವವನ್ನು ಮತ್ತೆ ದೃಢೀಕರಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ.
ಕೃಷ್ಣ-ಖರ್ ಭೇಟಿ: ಸಮಾವೇಶದಲ್ಲಿ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರನ್ನು ಭೇಟಿಯಾದ ಕೃಷ್ಣ, ಪಾಕ್ ನೆಲದಿಂದ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು. ಅಲ್ಲದೇ ಇದಕ್ಕೆ ಭಾರತವು ಹೆಚ್ಚುವರಿಯಾಗಿ ನಿರ್ದಿಷ್ಟ ಪುರಾವೆಗಳನ್ನು ನೀಡಿದೆ ಎಂದೂ ಹೇಳಿದರು.
ಪಾಕ್ ನೆಲದಿಂದ ಭಾರತದ ವಿರುದ್ಧ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಚಿವರು ರಬ್ಬಾನಿ ಅವರಿಗೆ ತಿಳಿಸಿದರು.
26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಅಬು ಜುಂದಾಲ್‌ನ ಹೇಳಿಕೆ, ಲಷ್ಕರ್-ಎ-ತೊಯ್ಬಾ ಸ್ಥಾಪಕ ಹಫೀಜ್ ಸಯೀದ್ ಸೆರೆ, ಸರಬ್ಜಿತ್ ಸಿಂಗ್ ಬಿಡುಗಡೆ ಇತ್ಯಾದಿ ವಿಷಯಗಳು ಉಭಯ ನಾಯಕರ ಮಧ್ಯೆ ಪ್ರಮುಖವಾಗಿ ಚರ್ಚೆಯಾದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.
| ಆಫ್ಘಾನಿಸ್ತಾನಕ್ಕೆ 16 ಕೋಟಿ ನೆರವು |
| ಆಫ್ಘಾನಿಸ್ತಾನಕ್ಕೆ 16 ಶತಕೋಟಿ ಡಾಲರ್ ಅಭಿವೃದ್ಧಿ ನೆರವು ನೀಡಲು ದಾನಿ ರಾಷ್ಟ್ರಗಳು ಮುಂದಾಗಿವೆ. ಈ ಹಣ ದುರ್ಬಳಕೆಯಾಗದಂತೆ ನಿಗಾ ವಹಿಸಬೇಕೆಂದೂ ಅವು ಹೇಳಿವೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.