ADVERTISEMENT

ಭಾರತದಿಂದ ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 28 ಮೇ 2012, 9:05 IST
Last Updated 28 ಮೇ 2012, 9:05 IST

ನೇಯ್ ಪೀ ಡಾವ್ (ಮ್ಯಾನ್ಮಾರ್) (ಪಿಟಿಐ): ವಿಮಾನಯಾನ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಕುರಿತಂತೆ ಭಾರತ ಮತ್ತು ಮ್ಯಾನ್ಮಾರ್ ಸೋಮವಾರ ಹಲವು ಒಪ್ಪಂದಗಳಿಗೆ ಸಹಿಹಾಕಿದವು. ಈ ವೇಳೆ ಭಾರತವು ದ್ವಿಪಕ್ಷೀಯ ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್ ಸಾಲದ ನೆರವು ನೀಡುವುದಾಗಿ ಘೋಷಿಸಿತು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧ್ಯಕ್ಷ ಭವನದಲ್ಲಿ ಅಧ್ಯಕ್ಷ ಥೇನ್ ಸೇನ್ ಅವರೊಂದಿಗೆ ಸಭೆ ನಡೆಸಿ ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ಪೂರಕವಾದ ಹತ್ತುಹಲವು ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಸಿಂಗ್ ಅವರು ಮ್ಯಾನ್ಮಾರ್‌ನ ಆರ್ಥಿಕ ಅಭಿವೃದ್ಧಿಗೆ ಭಾರತ ಬದ್ಧವಿದೆ ಎಂದು ಹೇಳಿದರು. 

ಸಭೆಯ ನಂತರ ಕಳೆದ ಅಕ್ಟೋಬರ್‌ನಲ್ಲಿ ನವದೆಹಲಿಗೆ ಮ್ಯಾನ್ಮಾರ್ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮ್ಯಾನ್ಮಾರ್ ಫಾರೀನ್ ಟ್ರೇಡ್ ಬ್ಯಾಂಕ್ ಮಧ್ಯದ ರಫ್ತು - ಆಮದು ಕುರಿತಾದ 50 ಕೋಟಿ ಡಾಲರ್‌ನ ಆರ್ಥಿಕ ನೆರವಿನ ಒಪ್ಪಂದವೂ ಸೇರಿದಂತೆ, ಉಭಯ ದೇಶಗಳ ನಡುವಿನ ವಿಮಾನಯಾನ ಸೇವೆ, ಗಡಿ ಭಾಗದಾದ್ಯಂತ ಜಂಟೀ ಉದ್ಯಮ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆ ಮಾರುಕಟ್ಟೆ ಸ್ಥಾಪನೆ ಕುರಿತ ಹಲವು ಒಪ್ಪಂದಗಳಿಗೆ ಎರಡು ದೇಶಗಳು ಸಹಿ ಹಾಕಿದವು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಸಿಂಗ್ ಅವರು `ನಾವು ದ್ವಿಪಕ್ಷೀಯ ಸಹಕಾರದ ಹೊಸ ಪಯಣ ಆರಂಭಿಸಿದ್ದೇವೆ~ ಎಂದು ಹೇಳಿದರೆ, ಅಧ್ಯಕ್ಷ ಥೇನ್ ಸೇನ್ ಅವರು `ನಮ್ಮ ಆರ್ಥಿಕತೆ ಮತ್ತು ಅಭಿವೃದ್ಧಿ ಪಾಲುದಾರಿಕೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ~ ಎಂದು ತಿಳಿಸಿದರು.
 
ಕಾಲು ಶತಮಾನದಲ್ಲಿ ಮ್ಯಾನ್ಮಾರ್‌ಗೆ ಪ್ರವಾಸ ಕೈಗೊಂಡಿರುವ ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.