ADVERTISEMENT

ಭಾರತೀಯ ಉದ್ಯೋಗಿಗಳ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ದುಬೈ (ಪಿಟಿಐ): ವೀಸಾ ಮೇಲಿನ ನಿಯಂತ್ರಣ, ವಿದೇಶಿಯರ ಉದ್ಯೋಗ  ಅವ­ಕಾಶಗಳಲ್ಲಿ ಕಡಿತ ಹಾಗೂ ರಾಷ್ಟ್ರೀಕರಣ ಕಾರ್ಯಕ್ರಮಗಳ ಜಾರಿಗೆ ಮುಂದಾಗಿರುವ ತೈಲ ರಾಷ್ಟ್ರವಾದ ಒಮನ್‌ನಲ್ಲಿ, ಕಳೆದ ಎರಡು ತಿಂಗಳಲ್ಲಿ ಭಾರತೀಯ ಉದ್ಯೋಗಿಗಳ ಸಂಖ್ಯೆ ಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.
 
ಈ ಕುರಿತು ‘ರಾಷ್ಟ್ರೀಯ ಅಂಕಿ ಅಂಶ ಮತ್ತು ಮಾಹಿತಿ ಕೇಂದ್ರ’ (ಎನ್‌ಸಿಎಸ್‌ಐ) ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶವನ್ನು ‘ಟೈಮ್ಸ್‌ ಒಮನ್‌’ ಪತ್ರಿಕೆ ವರದಿ ಮಾಡಿದೆ. 
 
‘ಎನ್‌ಸಿಎಸ್‌ಐ’ ದತ್ತಾಂಶದ ಪ್ರಕಾರ, ‘ಭಾರತ ಮಾತ್ರವಲ್ಲದೆ, ಪಾಕಿಸ್ತಾನ ಮತ್ತು ಇಥಿಯೋಪಿಯಾ ದೇಶಗಳ ಉದ್ಯೋಗಿಗಳ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ’.
 
‘2013ರ ಡಿಸೆಂಬರ್‌ನಲ್ಲಿ 59,9,437 ಇದ್ದ ಭಾರತೀಯ ಉದ್ಯೋಗಿ­ಗಳ ಸಂಖ್ಯೆ 2014ರ ಜನವರಿಯಲ್ಲಿ 59,8,674ಕ್ಕೆ ಅಂದರೆ 0.1ರಷ್ಟು ಇಳಿಕೆಯಾಗಿದೆ. ಅಂತೆಯೇ ನವೆಂಬರ್‌ನಲ್ಲಿ 60,0349 ಇದ್ದ  ಉದ್ಯೋಗಿಗಳ ಪ್ರಮಾಣ ಡಿಸೆಂಬರ್‌ ಹೊತ್ತಿಗೆ 59,9,743ನಷ್ಟು ಇಳಿಮುಖ­ವಾ­ಗಿದೆ’ ಎಂದು ವರದಿ ತಿಳಿಸಿದೆ.
 
‘ದೇಶದ ಜನತೆಗೆ ಉದ್ಯೋಗಗಳನ್ನು ಮೀಸಲುಗೊಳಿಸುವ ಮೂಲಕ, ಖಾಸಗಿ ಕ್ಷೇತ್ರದಲ್ಲಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಶೇ 39ರಿಂದ 
ಶೇ 33ಕ್ಕೆ  ಕಡಿತಗೊಳಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ಸಚಿವಾಲಯ ವಿವಿಧ ಬಗೆಯ ಉದ್ಯೋಗಗಳ ಮೇಲೆ ವಿದೇಶಿಯರಿಗೆ ತಾತ್ಕಾಲಿಕ ನಿಷೇಧ ಹೇರಿತ್ತು’ ಎಂದು ಒಮನ್‌ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯ ವಕೀಲರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.