ADVERTISEMENT

ಭಾರತೀಯ ಕಾರ್ಮಿಕರಿಗೆ ಚಿತ್ರಹಿಂಸೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:00 IST
Last Updated 21 ಏಪ್ರಿಲ್ 2011, 19:00 IST

ವಾಷಿಂಗ್ಟನ್ (ಎಎಫ್‌ಪಿ): ಭಾರತ ಮತ್ತು ಥಾಯ್ಲೆಂಡ್ ಕಾರ್ಮಿಕರಿಗೆ ಕಿರುಕುಳ ನೀಡಿದ ಆಪಾದನೆಯ ಮೇಲೆ ಅಮೆರಿಕದ ಎರಡು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅಮೆರಿಕದ ಕೃಷಿ ಕ್ಷೇತ್ರದಲ್ಲಿ ನಡೆದ ಅತಿ ದೊಡ್ಡ ಮಾನವ ಕಳ್ಳಸಾಗಾಣಿಕೆ ಪ್ರಕರಣ ಇದು ಎಂದು ಕರೆದಿರುವ ಸಮಾನ ಉದ್ಯೋಗ ಅವಕಾಶ ಆಯೋಗವು, ಎರಡೂ ಕಂಪೆನಿಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಅಲಬಾಮಾ ಮೂಲದ ಸಿಗ್ನಲ್ ಇಂಟರ್‌ನ್ಯಾಷನಲ್ ಮತ್ತು ಗ್ಲೋಬಲ್ ಹೊರೈಜನ್ ಕಂಪೆನಿಗಳು ಕ್ರಮವಾಗಿ ಭಾರತ ಮತ್ತು ಥಾಯ್ಲೆಂಡ್‌ನ ಕಾರ್ಮಿಕರನ್ನು ಇಲ್ಲಿಗೆ ಕರೆತಂದು ವಿವಿಧ ಕೃಷಿ ಕಂಪೆನಿಗಳಲ್ಲಿ ನೌಕರಿ ಕೊಡಿಸಿವೆ.

ಆದರೆ ಈ  ಕಂಪೆನಿಗಳು ಕಾರ್ಮಿಕರಿಗೆ ತೀರಾ ಕಡಿಮೆ ಕೂಲಿ ಕೊಡುವುದರ ಜತೆಗೆ ಒಂದೇ ಕೊಠಡಿಯಲ್ಲಿ ಅನೇಕ ಕಾರ್ಮಿಕರು ಉಸಿರುಗಟ್ಟುವ ವಾತಾವರಣದಲ್ಲಿ ವಾಸಿಸುವಂತೆ ಮಾಡಿವೆ. ಯಾವುದೇ ಸೌಲಭ್ಯಗಳಿಲ್ಲದ ಕೊಠಡಿಯಲ್ಲಿ ಇಲಿ ಮತ್ತು ಸೊಳ್ಳೆ ಕಾಟದ ಜತೆಗೆ ಬೈಗುಳ, ಹೊಡೆತದಂತಹ ಚಿತ್ರಹಿಂಸೆಯನ್ನು ಈ ಕಾರ್ಮಿಕರು ಅನುಭವಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

ಈ ಕಾರ್ಮಿಕರಿಗೆ ಅಮೆರಿಕದ ವೀಸಾ ಕೊಡಿಸಲು ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲಾಗಿದೆಯಲ್ಲದೆ ಉತ್ತಮ ಸಂಬಳ ಕೊಡಿಸುವ ಆಮಿಷ ಒಡ್ಡಿ ವಂಚಿಸಲಾಗಿದೆ. ಅವರ ಹೆಸರಿನ ಬದಲಿ ಸಂಖ್ಯೆಯನ್ನು ನೀಡಿ ಈ ಸಂಖ್ಯೆಯ ಮೂಲಕವೇ ಕರೆಯಲಾಗುತ್ತಿತ್ತು ಮತ್ತು ಇವರನ್ನು ಕೂಡಿಹಾಕಲಾಗಿದ್ದ ಕೊಠಡಿಗಳ ಸುತ್ತ ತಂತಿಬೇಲಿ ಹಾಕಿ  ಚಲನವಲನಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

ಕ್ಯಾಪ್ಟನ್ ಕೂಕ್ ಕಾಫಿ, ಡೆಲ್ ಮೊಂಟೆ ಫ್ರೆಶ್ ಪ್ರೊಡ್ಯೂಸ್, ಕೌವಾಯಿ ಕಾಫಿ ಕಂಪೆನಿ, ಕೆಲೆನಾ ಫಾರ್ಮ್ಸ್, ಮ್ಯಾಕ್ ಫಾರ್ಮ್ಸ್ ಆಫ್ ಹವಾಯಿ, ಮಾವು ಪೈನಾಪಲ್, ಗ್ರೀನ್ ಎಕ್ರ್ ಫಾರ್ಮ್ಸ್ ಮತ್ತು ವೆಲ್ಲಿ ಫ್ರೂಟ್ ಆರ್ಚಾರ್ಡ್ಸ್ ಕಂಪೆನಿಗಳು ಇಂತಹ ಆರೋಪಕ್ಕೆ ಒಳಗಾಗಿವೆ. ಇವುಗಳ ವಿರುದ್ಧ ಅಮೆರಿಕದ ಪೊಲೀಸರು ವಂಚನೆ, ಚಿತ್ರಹಿಂಸೆ ಮುಂತಾದ ಆಪಾದನೆಗಳನ್ನು ಹೊರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.