ADVERTISEMENT

ಭಾರತೀಯ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ: ಹಿಲರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:15 IST
Last Updated 26 ಫೆಬ್ರುವರಿ 2011, 16:15 IST

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾ ಮೂಲದ ಟ್ರೈವ್ಯಾಲಿ ವಿಶ್ವವಿದ್ಯಾಲಯದಿಂದ ವಂಚನೆಗೆ ಒಳಗಾದ ಭಾರತೀಯ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು ಮತ್ತು ಕಾಲಿಗೆ ಕಾಲ್ಪಟ್ಟಿ ಅಳವಡಿಕೆ ಮಾಡಿದ್ದರಿಂದ ಘಾಸಿಗೊಂಡವರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುವುದು ಎಂದು ಅಮೆರಿಕವು ಭಾರತಕ್ಕೆ ಭರವಸೆ ನೀಡಿದೆ.

ಅಮೆರಿಕ ವಿಶ್ವವಿದ್ಯಾಲಯದಿಂದ ಭಾರತೀಯ ವಿದ್ಯಾರ್ಥಿಗಳಿಗೆ ಆಗಿರುವ ವಂಚನೆ, ಅಗೌರವ ತರುವಂತಹ ನಡುವಳಿಕೆ ಬಗ್ಗೆ ಅಮೆರಿಕದಲ್ಲಿನ ಭಾರತದ ರಾಯಭಾರಿ ಮೀರಾ ಶಂಕರ್ ಕಳವಳ ವ್ಯಕ್ತಪಡಿಸಿ ಅಲ್ಲಿನ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಈ ಭರವಸೆಯನ್ನು ಪತ್ರ ಮುಖೇನ ನೀಡಿದ್ದಾರೆ.

‘ಟ್ರೈ ವ್ಯಾಲಿ ವಿಶ್ವವಿದ್ಯಾಲಯದ ವಂಚನೆ ಪ್ರಕರಣದ ಬಗ್ಗೆ ತೀವ್ರ ಗಮನ ವಹಿಸಲಾಗಿದೆ. ಈ ವಿಶ್ವವಿದ್ಯಾಲಯದಿಂದ ಮೋಸ ಹೋದ ಭಾರತೀಯ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಯಲಾಗುವುದು. ಕಾಲಿನ ಪಟ್ಟಿ ಅಳವಡಿಕೆಯಿಂದ ಘಾಸಿಗೊಂಡವರಿಗೆ ಸೂಕ್ತ  ಔಷಧೋಪಚಾರ ನೀಡಲಾಗುವುದು’ ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ. ಟ್ರೈ ವ್ಯಾಲಿ ವಿಶ್ವವಿದ್ಯಾಲಯದ ಒಟ್ಟು 1500 ವಿದ್ಯಾರ್ಥಿಗಳಲ್ಲಿ 700 ಮಂದಿಯನ್ನು ಬೇರೆ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೀರಾ ಶಂಕರ್ ತಿಳಿಸಿದ್ದಾರೆ.

ಈ ಮಧ್ಯೆ ಭಾರತೀಯ ವಿದ್ಯಾರ್ಥಿಯೊಬ್ಬನ ಕಾಲಿನಿಂದ ಪಟ್ಟಿಯನ್ನು ತೆಗೆಯಲಾಗಿದೆ. ಇದರಿಂದ ಒಟ್ಟು 12 ಮಂದಿ ವಿದ್ಯಾರ್ಥಿಗಳ ಕಾಲು ಟ್ಟಿ ತೆಗೆದಂತೆ ಆಗಿದೆ.

ಟ್ರೈ ವ್ಯಾಲಿ ವಿಶ್ವವಿದ್ಯಾಲಯದಿಂದ ವಂಚನೆಗೆ ಒಳಗಾದ ವಿದ್ಯಾರ್ಥಿಗಳ ಚಲನವಲನದ ಬಗ್ಗೆ ನಿಗಾ ಇರಿಸಲು ಕಾಲು ಪಟ್ಟಿ ಅಳವಡಿಕೆ ಮಾಡಿದ್ದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಹಿಲರಿ ಕ್ಲಿಂಟನ್ ಅವರು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ನಂತರ ಈ ವಿಚಾರವಾಗಿ ಮೀರಾ ಶಂಕರ್, ಅಮೆರಿಕ ಸರ್ಕಾರ, ವಿದೇಶಾಂಗ ಇಲಾಖೆ, ವಲಸೆ ಮತ್ತು ಸುಂಕದ ಇಲಾಖೆಗಳಿಗೆ ಭಾರತ ನಿಲುವನ್ನು ವಿವರಿಸಿ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಫೆ. 22ರಂದು ಹಿಲರಿ ಕ್ಲಿಂಟನ್ ಈ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.